Connect with us

Districts

ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

Published

on

Share this

– ಮೊಬೈಲ್ ಲಭ್ಯತೆ ಕುರಿತು ಸಮೀಕ್ಷೆಗೆ ಮುಂದಾದ ಶಿಕ್ಷಣ ಇಲಾಖೆ

ಕಾರವಾರ: ಕಾಣೆಯಾದವರನ್ನು ಪೊಲೀಸರು ಪತ್ತೆಹಚ್ಚುವುದು ಸಾಮಾನ್ಯ. ಆದ್ರೆ ಇದೀಗ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ತಮ್ಮ ಶಾಲೆಯ ಮಕ್ಕಳನ್ನು ಪತ್ತೆಹಚ್ಚಲು ಶಿಕ್ಷಕರು ಪೊಲೀಸರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಕೊರೊನಾದಿಂದ ಕೆಲವು ತಿಂಗಳು ಶಾಲೆಗಳು ಮುಚ್ದಿದ್ದರಿಂದ ವಿದ್ಯಾರ್ಥಿಗಳು ಶಾಲೆಯಿಂದ ದೂರವಿದ್ದಾರೆ. ಇಂಥ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವುದು ಕೂಡ ಸವಾಲಿನ ಕೆಲಸವಾಗಿದೆ. ಆದ್ರೆ ಬಹುತೇಕ ಗುಡ್ಡಗಾಡು ಹಾಗೂ ಸಂಪರ್ಕವೇ ಸಿಗದ ಹಳ್ಳಿಗಳಿರುವ ಹಿಂದುಳಿದ ಜಿಲ್ಲೆಯಾದ ಉತ್ತರಕನ್ನಡ ಜಿಲ್ಲೆಯ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲವು ಮಕ್ಕಳು-ಶಿಕ್ಷಕರ ನಡುವಿನ ಸಂಪರ್ಕ ವಿವಿಧ ಕಾರಣಗಳಿಂದ ಕಡಿತಗೊಂಡಿದೆ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನ ಎರಡೇ ದಿನಕ್ಕೆ ಸೀಮಿತ ಮಾಡಿರುವುದರಿಂದ ಪರೀಕ್ಷೆ ಬರೆದ ಪ್ರತಿಯೊಬ್ಬರೂ ಉತ್ತೀರ್ಣರಾಗಲಿದ್ದಾರೆಂದು ಇಲಾಖೆ ತಿಳಿಸಿದೆ. ಆದ್ರೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಕೊಟ್ಟು ಅಭ್ಯಾಸ ಮಾಡಿಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ.

ಹೀಗಾಗಿ ಶಿಕ್ಷಕರು ಮಕ್ಕಳ ಸಂಪರ್ಕಕ್ಕಾಗಿ ಹರಸಾಹಸಪಡಬೇಕಾಗಿದೆ. ಯಾಕಂದ್ರೆ ಗುಡ್ಡಗಾಡು ಪ್ರದೇಶಗಳನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ಹಳ್ಳಿಗಳಿಗೆ ಬಸ್ ಸಂಪರ್ಕವೇ ಇಲ್ಲ. ಇನ್ನು ನೆಟ್ ವರ್ಕ್ ಕೂಡ ಇಲ್ಲದ ಕುಗ್ರಾಮಗಳಿಂದ ಮಕ್ಕಳನ್ನ ಹುಡುಕುವುದೇ ಶಿಕ್ಷಕರಿಗೆ ಕಷ್ಟಸಾಧ್ಯವಾಗಿದೆ. ಹೀಗಾಗಿ ಶಿಕ್ಷಕರ ಸಭೆಯಲ್ಲಿ ಅಧಿಕಾರಿಗಳು ಮಕ್ಕಳ ಪತ್ತೆಗಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನ ಪತ್ತೆ ಮಾಡುವ ಕಾರ್ಯವನ್ನ ಶಿಕ್ಷಕರು ನಡೆಸುತಿದ್ದಾರೆ.

ಮಕ್ಕಳ ಪತ್ತೆಯೇ ಸವಾಲು!
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಹಾಗೂ ಕಾರವಾರ ಎಂಬ ಎರಡು ಶೈಕ್ಷಣಿಕ ಜಿಲ್ಲೆಯಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,033 ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10,252 ವಿದ್ಯಾರ್ಥಿಗಳಿದ್ದಾರೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರವಾರ ತಾಲೂಕು ಹೊರತುಪಡಿಸಿದರೆ ಮಕ್ಕಳನ್ನು ಸಂಪರ್ಕಿಸಲು ಕಷ್ಟವಾಗದು. ಆದರೇ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶಗಳಿವೆ. ಇನ್ನು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಳ್ಳಿಗಳನ್ನು ಸಂಪರ್ಕಿಸುವುದೇ ದೊಡ್ಡ ಸವಾಲಾಗಿದ್ದು ಹಲವು ಹಳ್ಳಿಗಳು ಆರು ತಿಂಗಳುಕಾಲ ಬಾಹ್ಯ ಸಂಪರ್ಕ ಸಹ ಕಡಿತವಾಗುತ್ತದೆ.

ಈ ಹಿಂದೆ ಶಿಕ್ಷಣಾಧಿಕಾರಿಗಳು ಹೈಸ್ಕೂಲ್ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದರು. ಆಗ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಾರವಾರ ಶೈಕ್ಷಣಿಕ ಜಿಲ್ಲೆಯ 83 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಇದುವರೆಗೂ ಶಾಲೆಗಳ ಅಥವಾ ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಹುಡುಕಿ ತರುವ ಜವಾಬ್ದಾರಿಯನ್ನು ಹೈಸ್ಕೂಲ್ ಶಿಕ್ಷಕರಿಗೆ ನೀಡಲಾಗಿದೆ. ತಮ್ಮ ಶಾಲೆಯ ಎಲ್ಲ ಮಕ್ಕಳನ್ನು ಹೇಗಾದರೂ ಸಂಪರ್ಕಿಸಿ ಅವರಿಗೆ ಪಾಠ ಮಾಡುವ ಜವಾಬ್ದಾರಿಯನ್ನ ಶಿಕ್ಷಕರು ಹೊತ್ತುಕೊಂಡಿದ್ದಾರೆ.

ಹೀಗಾಗಿ ಬೈಕ್ ಗಳ ಮೂಲಕ ವಿಳಾಸ ಹಿಡಿದು ವಿದ್ಯಾರ್ಥಿಗಳ ಮನೆಯನ್ನ ಹುಡುಕುತ್ತಿದ್ದಾರೆ. ನಗರ ಪ್ರದೇಶದ ಮಕ್ಕಳು ಈಗಾಗಲೇ ಶಿಕ್ಷಕರ ಸಂಪರ್ಕದಲ್ಲಿದ್ದು, ವಾಟ್ಸಪ್ ಗ್ರೂಪ್ ಮಾಡಿಕೊಂಡು ಆನ್‍ಲೈನ್ ತರಗತಿ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಮೊಬೈಲ್ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿರುವ ಹಾಗೂ ಮೊಬೈಲ್ ಇಲ್ಲದ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿಳಾಸ ಹುಡುಕಿ ಮನೆಗಳಿಗೆ ತೆರಳಿ ಅವರನ್ನು ಪತ್ತೆ ಮಾಡೋದೇ ದೊಡ್ಡ ಸವಾಲಾಗಿದ್ದು ಪರೀಕ್ಷೆಗೆ ಹಾಜುರಾಗದ ಭೀತಿ ಕಾಣುತ್ತಿದೆ.

ಮೊಬೈಲ್ ಲಭ್ಯತೆ ಕುರಿತು ಸಮೀಕ್ಷೆ
ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಗೂ ಪಾಲಕರ ಬಳಿ ಸ್ಮಾರ್ಟ್ ಫೋನ್‍ಗಳಿವೆ ಎಂಬ ಸಮೀಕ್ಷೆ ಮಾಡಲಾಗುತ್ತಿದ್ದು, ಒಂದು ವಾರದಲ್ಲಿ ಪೂರ್ಣಗೊಳ್ಳಬಹುದು. ಈ ಮಾಹಿತಿಯನ್ನು ಆಧರಿಸಿ ಆನ್‍ಲೈನ್ ತರಗತಿಗಳಿಗೆ ಎಷ್ಟು ಮಂದಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಲು ಸಾಧ್ಯವಾಗುತ್ತದೆ ಜೊತೆಗೆ ಹಳ್ಳಿಗಳ ಮಕ್ಕಳ ಸಂಪರ್ಕಕ್ಕೂ ಸಫಲವಾಗಲಿದೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹರೀಶ ಗಾಂವ್ಕರ್ ತಿಳಿಸಿದ್ದಾರೆ.

ಹೆಚ್ಚುವರಿ ಪರೀಕ್ಷಾ ಕೇಂದ್ರ ತೆರೆಯಲಿರುವ ಶಿಕ್ಷಣ ಇಲಾಖೆ
ಉತ್ತರ ಕನ್ನಡದ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 49 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ 73ರಿಂದ 122ಕ್ಕೆ ಏರಿಸಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿದ್ದ 38 ಕೇಂದ್ರಗಳ ಬದಲು 60 ಹಾಗೂ ಶಿರಸಿ ಜಿಲ್ಲೆಯಲ್ಲಿ 35 ಕೇಂದ್ರಗಳ ಜೊತೆಗೆ 27 ಕೇಂದ್ರಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಒಂದೇ ಕಡೆ 100 ವಿದ್ಯಾರ್ಥಿಗಳಿದ್ದರೆ ಅಲ್ಲಿ ಹೊಸ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಅಂಕೋಲಾ ತಾಲೂಕಿನ ಹಿಲ್ಲೂರು, ಸುಂಕಸಾಳ, ಶಿರಸಿ ತಾಲ್ಲೂಕಿನ ಬಂಡಲ, ದೇವನಹಳ್ಳಿಯಲ್ಲಿ ಪರೀಕ್ಷೆ ಕೇಂದ್ರಗಳು ಆರಂಭವಾಗಲಿವೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ಸಲುವಾಗಿ ತಾಲೂಕು ಕೇಂದ್ರಗಳಿಗೆ ಬರುವುದು ತಪ್ಪಲಿದೆ.

ಕೋವಿಡ್ ಕಾರಣದಿಂದ ಅನಿಶ್ಚಿತವಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಯವುದರ ಜೊತೆಗೆ ಜೂನ್ 15ರಿಂದ ಈ ಬಾರಿಯ ಶೈಕ್ಷಣಿಕ ವರ್ಷವೂ ಶುರುವಾಗಿದೆ. ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬದಲಾದ ಸ್ವರೂಪದ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಶಿರಸಿ ಜಿಲ್ಲೆಯಲ್ಲಿ ‘ಪ್ರೇರಣಾ ಶಿಬಿರ’ಗಳನ್ನು ಆರಂಭಿಸಲಾಗಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಶೇ.100 ಅಂಕ ಗಳಿಸುವ ಗುರಿಯೊಂದಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೂ ಇಲಾಖೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಮಕ್ಕಳಿಗೆ ಎನ್-95 ಮುಖಗವಸು ನೀಡಲಾಗುತ್ತದೆ. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಹಾಜರಾಗಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಇವುಗಳ ನಡುವೆ ಪತ್ತೆಯಾಗದ ಮಕ್ಕಳ ಸಮಸ್ಯೆ ಸಹ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಕೇವಲ ನೆಟ್‍ವರ್ಕ್ ಸಮಸ್ಯೆದಿಂದ ಮಾತ್ರ ಮಕ್ಕಳು ಸಂಪರ್ಕಕ್ಕೆ ಸಿಗದಿರಲು ಕಾರಣವಾಗಿಲ್ಲ. ಉತ್ತರ ಕರ್ನಾಟಕ ಭಾಗದಿಂದ ಇಲ್ಲಿ ನೆಲೆಸಿದ್ದ ಸಾಕಷ್ಟು ಕುಟುಂಬಗಳು ಕೋವಿಡ್ ಲಾಕ್‍ಡೌನ್ ಹಾಗೂ ಆರ್ಥಿಕ ಸಂಕಷ್ಟದಿಂದ ತಮ್ಮ ಸ್ವಂತ ಊರು ತಲುಪಿದ್ದಾರೆ. ಇಂತಹ ಹಲವು ಪಾಲಕರ ಬಳಿ ಮೊಬೈಲ್ ಸಹ ಇಲ್ಲ. ಹಲವು ಮಕ್ಕಳು ದಟ್ಟ ಅಡವಿ ಭಾಗದಲ್ಲಿ ವಾಸವಿರಿವುದರಿಂದ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುವ ಸಾಕಷ್ಟು ಹಳ್ಳಿಗಳಿವೆ; ಹೀಗಾಗಿ ಈ ಮಕ್ಕಳು ನಿಗದಿ ದಿನದಲ್ಲಿ ಸಿಗದಿದ್ದರೆ ಶಿಕ್ಷಣದಿಂದ ವಂಚಿತರಾಗಿವ ಆತಂಕ ಎದುರಾಗಿದೆ.

Click to comment

Leave a Reply

Your email address will not be published. Required fields are marked *

Advertisement