Crime
ಪೆಪ್ಪರ್ ಸ್ಪ್ರೇ ಬಳಸಿ ಮಗಳನ್ನೇ ಅಪಹರಿಸಿದ ತಾಯಿ!

ಕಾರವಾರ: ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿಯೇ ಮಗಳನ್ನು ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದು ವರದಿಯಾಗಿದೆ.
ತಾಯಿಯಿಂದ ಅಪಹರಣಕ್ಕೊಳಗಾದ ಯುವತಿಯನ್ನು ರುತಿಕಾ ಎಂದು ಗುರುತಿಸಲಾಗಿದೆ. ಈಕೆಯ ತಾಯಿ ರೂಪ ಶಿರ್ಸಿಕರ್ ಆಗಿದ್ದು, ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದಳು.
ರುತಿಕಾ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬ ಯುವಕನನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಈ ಬಗ್ಗೆ ತಾಯಿ ರೂಪ ಶಿರ್ಸಿಕರ್ಗೆ ಇಷ್ಟವಿರಲಿಲ್ಲ. ಮಗಳು ತನ್ನ ಮಾತು ಕೇಳದೆ ಬೇರೆ ಯುವಕನನ್ನು ವಿವಾಹವಾಗಿದ್ದಕ್ಕೆ ಕುಪಿತಗೊಂಡ ತಾಯಿ ಇಂದು ಬೆಳಗ್ಗೆ ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ಬಂದಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ.
ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಮಣಿಕಂಠ ಅವರು ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದಾರೆ. ಇನ್ನು ಅಪಹರಣ ಮಾಡಿದ ರೂಪ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ, ಕುಟುಂಬದೊಂದಿಗೆ ಪರಾರಿಯಾಗಿದ್ದು ಈಕೆಯ ಹುಡುಕಾಟ ನಡೆಸಲಾಗುತ್ತಿದೆ.
