Connect with us

Karnataka

ಕಾಗೇರಿ ಕ್ಷೇತ್ರದಲ್ಲಿ ಮಕ್ಕಳಿಗಾಗಿ ಸೇತುವೆ ನಿರ್ಮಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್‌

Published

on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರದೇಶಗಳು ಅರಣ್ಯಮಯವಾದ್ದರಿಂದ ಸಮಸ್ಯೆಗಳು ಹೆಚ್ಚು. ಇದನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ತಮಗೆ ಸಂಬಂಧವಿಲ್ಲ ಎಂಬಂತೆ ಮೂಗು ಮುರಿಯುತ್ತಾರೆ. ಅದರೆ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸೇತುವೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ವಿಧಾನಸಭೆ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ್ ಹೆಗಡೆಯವರ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸರಿಮನೆ ಗ್ರಾಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮನೆಗಳಿವೆ. ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ನಾಲ್ಕು ಕಿ.ಮೀ. ನಡೆದು ಹೋಗಬೇಕು. ಈ ಮಾರ್ಗದಲ್ಲಿ ಬಸರಿಮನೆ ಹೊಳೆ ಸಾಗುತ್ತದೆ. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುವುದರಿಂದ ಅಡಿಕೆ ಹಾಗೂ ಮರದ ಹಲಗೆಯಲ್ಲಿ ನಿರ್ಮಿಸಿದ ಕಾಲು ಸಂಕವೇ ಶಾಲೆಗೆ ಹೋಗುವ ಮಕ್ಕಳಿಗೆ ಜೀವರಕ್ಷಕ.

ಮಳೆಗಾಲದಲ್ಲಿ ಈ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಹೀಗಾಗಿ ಇಲ್ಲಿನ ಶಾಸಕರು, ಸದ್ಯ ರಾಜ್ಯದ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹಾಗೂ ಸಂಸದ ಅನಂತಕುಮಾರ್ ಹೆಗಡೆಗೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರು.

2019ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ಬಿಡುಗಡೆಯಾದರೂ ಸೇತುವೆ ಮಾತ್ರ ನಿರ್ಮಾಣವಾಗಲಿಲ್ಲ. ಈ ಬಗ್ಗೆ ಸ್ಪೀಕರ್ ಕಾಗೇರಿಗೆ ಹಲವು ಬಾರಿ ಮನವಿ ನೀಡಿದ್ದರು. ಆದರೆ ಕೆಲಸ ಮಾತ್ರ ಪ್ರಾರಂಭ ಆಗಲೇ ಇಲ್ಲ. ಹೀಗಾಗಿ ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತ್ ಆಳ್ವ ಅವರ ಗಮನಕ್ಕೆ ತಂದಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೆಲವು ಅಡೆತಡೆಗಳು ಬಂದಿದ್ದರಿಂದ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಹಾಗಂತ ಅವರು ಸುನ್ಮನೆ ಕೂರದೆ ತಮ್ಮ ಸ್ನೇಹಿತರಾಗಿದ್ದ ಬೆಂಗಳೂರಿನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಗಮನಕ್ಕೆ ತಂದು ಸಹಾಯ ಬೇಡಿದ್ದರು. ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಅರಿತ ಅವರು, ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹತ್ತು ಲಕ್ಷ ರೂ. ಹಣವನ್ನು ಮಂಜೂರು ಮಾಡಿ ಉ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ನಿವೇದಿತ್ ಆಳ್ವ ಸಹ ಈ ಬಗ್ಗೆ ಮುತುವರ್ಜಿ ವಹಿಸಿ ಸೇತುವೆ ನಿರ್ಮಾಣ ಆಗುವ ವರೆಗೆ ಪ್ರತಿ ಬಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತಿದ್ದರು. ಇದರ ಪ್ರತಿಫಲವಾಗಿ ಇಂದು ಸೇತುವೆ ನಿರ್ಮಾಣವಾಗಿದ್ದು, ಜನ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭಯದಲ್ಲೇ ಸಾಗುತಿದ್ದ ಮಕ್ಕಳಿಗೆ ಈ ಬಾರಿಯಿಂದ ಮಳೆಗಾಲದ ಭಯ ದೂರವಾಗಿದೆ.

Click to comment

Leave a Reply

Your email address will not be published. Required fields are marked *