Thursday, 12th December 2019

ಗೆಳತಿಯನ್ನು ಭೇಟಿಯಾಗಲು ರಾತ್ರಿ ಊರಿಗೆ ಬಂದಿದ್ದ ಯುವಕನಿಗೆ ಗ್ರಾಮಸ್ಥರಿಂದ ಗೂಸಾ

– ಮಗನನ್ನು ಕರೆತರಲು ಬಂದಿದ್ದ ಅಪ್ಪನನ್ನೂ ಕಟ್ಟಿ ಹಾಕಿದ ಗ್ರಾಮಸ್ಥರು

ಲಕ್ನೋ: ಗೆಳತಿಯನ್ನು ಭೇಟಿಯಾಗಲು ಆಕೆಯ ಊರಿಗೆ ಹೋಗಿದ್ದ ಯುವಕನಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೇಜಾ ಗ್ರಾಮದ ಪವಣ್ ಹಲ್ಲೆಗೆ ಒಳಗಾದ ಯುವಕ. ಈ ಘಟನೆಯಲ್ಲಿ ಪವಣ್ ತಂದೆಗೂ ಗ್ರಾಮಸ್ಥರು ಥಳಿಸಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಆಗಿದ್ದೇನು?:
ಪವಣ್ ತನ್ನ ಸ್ನೇಹಿತ ವಿನಯ್ ಜೊತೆಗೆ ಸೇರಿ ಗೆಳತಿಯನ್ನು ಭೇಟಿಯಾಗಲು ಮೇಜಾ ಸಮೀಪದ ಔತಾ ಗ್ರಾಮಕ್ಕೆ ಜುಲೈ 17ರಂದು ರಾತ್ರಿ ತೆರಳಿದ್ದ. ಯುವತಿಯ ಕುಟುಂಬದವರ ಕೈಗೆ ಸಿಕ್ಕಿಬಿಳ್ಳುತ್ತಿದ್ದಂತೆ ವಿನಯ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪವಣ್‍ಗೆ ಹಿಗ್ಗಾಮುಗ್ಗಾ ಥಳಿಸಿ ಕೂಡಿ ಹಾಕಲಾಗಿತ್ತು. ಈ ವಿಚಾರ ತಿಳಿದು ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಪವಣ್ ತಂದೆಯನ್ನು ಕೂಡ ಕಟ್ಟಿ ಗ್ರಾಮಸ್ಥರು ಗೂಸಾ ಕೊಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣವೇ ಯುಮುನಾಪುರದ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರನಾಥ್ ಚೌಧರಿ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *