Connect with us

ಗಾಯಾಳುಗಳನ್ನು ಸಾಗಿಸಿದ್ರೆ ಪೊಲೀಸ್ ಕಾರಿನಲ್ಲಿ ರಕ್ತದ ಕಲೆಯಾಗುತ್ತೆ: ಖಾಕಿಗಳ ಅಮಾನವೀಯತೆಗೆ ಇಬ್ಬರು ಬಲಿ

ಗಾಯಾಳುಗಳನ್ನು ಸಾಗಿಸಿದ್ರೆ ಪೊಲೀಸ್ ಕಾರಿನಲ್ಲಿ ರಕ್ತದ ಕಲೆಯಾಗುತ್ತೆ: ಖಾಕಿಗಳ ಅಮಾನವೀಯತೆಗೆ ಇಬ್ಬರು ಬಲಿ

ಲಕ್ನೋ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಸವಾರರನ್ನು ಪೊಲೀಸರು ನೋಡಿಯೂ ಕೂಡಲೇ ಆಸ್ಪತ್ರೆಗೆ ದಾಖಲಿಸದ ಪರಿಣಾಮ ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.

17 ವರ್ಷದ ಅರ್ಪಿತ್ ಖುರಾನಾ ಮತ್ತು ಸನ್ನಿ ಮೃತ ದುರ್ದೈವಿಗಳು. ಗುರುವಾರ ರಾತ್ರಿ ಇಬ್ಬರು ಬೈಕಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ತಮ್ಮ ಪೊಲೀಸ್ ಕಾರಿನಲ್ಲಿ ಗಾಯಾಳುಗಳನ್ನು ಸಾಗಿಸಿದರೆ ಕಲೆಯಾಗುತ್ತದೆ ಎಂದು ನೆಪ ಹೇಳಿ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ನೋಡಲಾಗದೇ ಸ್ಥಳದಲ್ಲಿದ್ದವರು ದಯವಿಟ್ಟು ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ. ಆದರೆ ಪೊಲೀಸರು ನಮ್ಮ ಕಾರಿಗೆ ಕಲೆಯಾಗುತ್ತದೆ ಎಂದು ಮಾನವೀಯತೆ ಇಲ್ಲದವರಂತೆ ಮಾತನಾಡಿ ನಿರಾಕರಿಸಿದ್ದಾರೆ.

ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ನಿಮ್ಮ ಕಾರನ್ನು ಮತ್ತೆ ತೊಳೆದುಕೊಳ್ಳಬಹುದು. ಯುವಕರ ಜೀವ ಮುಖ್ಯ ಎಂದು ಹೇಳಿದಾಗ ಕಾರನ್ನು ತೊಳೆದರೆ ನಾವು ಕುಳಿತುಕೊಳ್ಳುವುದು ಎಲ್ಲಿ ಎಂದು ಬೇಜವಾಬ್ದಾರಿಯ ಪ್ರಶ್ನೆಯನ್ನು ಕೇಳಿದ್ದಾರೆ. ಇಷ್ಟೆಲ್ಲ ಘಟನೆಗಳು ನಡೆದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಿಂದ ಮತ್ತೊಂದು ವಾಹನ ಬಂದಿದ್ದು, ಆ ವಾಹನದಲ್ಲಿ ಸವಾರರನ್ನು ಸಾಗಿಸಲಾಗಿತ್ತು. ಆದರೆ ಆ ಹೊತ್ತಿಗೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಇಬ್ಬರು ಯುವಕರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಪೊಲೀಸರು ಮತ್ತು ಸ್ಥಳೀಯರ ನಡುವಿನ ಮಾತುಕತೆಯ ದೃಶ್ಯವನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಿಕ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ನಂತರ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹರಾನ್ಪುರದ ಪೊಲೀಸ್ ಮುಖ್ಯಸ್ಥ ಪ್ರಭಾದ್ ಪ್ರತಾಪ್ ತಿಳಿಸಿದ್ದಾರೆ.

Advertisement
Advertisement