Connect with us

Districts

ಗ್ಯಾಂಗ್‍ಸ್ಟರ್, ಪಾತಕಿ, ಹಾಲಿ ಶಾಸಕ ಅನ್ಸಾರಿಯನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸರು

Published

on

ಪಂಜಾಬ್‍ಗೆ ತೆರಳಿದ್ದ 150 ಪೊಲೀಸರು
– ಅನ್ಸಾರಿ ಪತ್ನಿಗೆ ನಕಲಿ ಎನ್‍ಕೌಂಟರ್ ಭೀತಿ

ಚಂಡೀಗಢ: 20 ವಾಹನಗಳಲ್ಲಿ ತೆರಳಿದ ಉತ್ತರ ಪ್ರದೇಶದ 150 ಪೊಲೀಸರು ಪಾತಕಿ, ಹಾಲಿ ಬಿಎಸ್‍ಪಿ ಶಾಸಕ ಮುಖ್ತಾರ್ ಅನ್ಸಾರಿ ಅವರನ್ನು ವಶಕ್ಕೆ ಪಡೆದು ಬಾಂದಾ ಜೈಲಿಗೆ ಕರೆತರುತ್ತಿದ್ದಾರೆ.

ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ರೂಪ್ ನಗರ ಜೈಲಿನಿಂದ ಏಪ್ರಿಲ್ 8ರೊಳಗೆ ಕಸ್ಟಡಿಗೆ ತೆಗೆದುಕೊಳ್ಳುವಂತೆ ಪಂಜಾಬ್ ಗೃಹ ಇಲಾಖೆ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರವೇ ಪಂಜಾಬ್‍ಗೆ ತೆರಳಿದ್ದ ಉತ್ತರ ಪ್ರದೇಶದ ಪೊಲೀಸರು ಇಂದು ಅನ್ಸಾರಿಯನ್ನು ವಶಕ್ಕೆ ಪಡೆದು ಬಿಗಿ ಭದ್ರತೆಯಲ್ಲಿ ಕರೆತರುತ್ತಿದ್ದಾರೆ.

ಪೊಲೀಸ್ ವಾಹನ, ಅಂಬುಲೆನ್ಸ್, ವಜ್ರ ವಾಹನದಲ್ಲಿ ಪೊಲೀಸರು ಬಂದ ಹಿನ್ನೆಲೆಯಲ್ಲಿ ರೂಪ್ ನಗರ ಜೈಲಿಗೆ ಬ್ಯಾರಿಕೇಡ್‍ಗಳನ್ನು ಹಾಕಿ ಭಾರೀ ಭದ್ರತೆಯನ್ನು ನೀಡಲಾಗಿತ್ತು.

2019ರ ಜನವರಿಯಿಂದ ಮುಖ್ತಾರ್ ಅನ್ಸಾರಿ ಅವರು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪ್‍ನಗರ ಜೈಲಿನಲ್ಲಿದ್ದರು. ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮಾರ್ಚ್ 26ರಂದು ಸುಪ್ರೀಂಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು.

ಬಿಎಸ್‍ಪಿ ಶಾಸಕರಾಗಿರುವ ಮುಖ್ತಾರ್ ಮೇಲೆ ಒಟ್ಟು 52 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 15 ವಿಚಾರಣಾ ಹಂತದಲ್ಲಿದೆ. 2005ರಲ್ಲಿ ನಡೆದ ಕೃಷ್ಣಾನಂದ ರೈ ಪ್ರಕರಣದಲ್ಲೂ ಅನ್ಸಾರಿ ಆರೋಪಿಯಾಗಿದ್ದಾರೆ.

ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಲ್ಲಬಹುದೆಂಬ ಆತಂಕ ವ್ಯಕ್ತಪಡಿಸಿದ ಅನ್ಸಾರಿ ಪತ್ನಿ ಆಫ್ಶಾನ್ ಅನ್ಸಾರಿ, ಪಂಜಾಬ್ ಜೈಲಿನಿಂದ ಉತ್ತರಪ್ರದೇಶಕ್ಕೆ ಕರೆ ತರುವಾಗ ಯಾವುದೇ ಅಪಾಯವಾಗದಂತೆ ಭದ್ರತೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.

1996, 2002, 2007, 2012, 2017 ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. 1996 ಮತ್ತು 2017 ರಲ್ಲಿ ಬಿಎಸ್‍ಪಿಯಿಂದ 2002, 2007 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದರೆ 2012ರಲ್ಲಿ ಕ್ವಾಮಿ ಏಕ್ತಾ ದಳದಿಂದ ಸ್ಪರ್ಧಿಸಿ ವಿಜೇತರಾಗಿದ್ದರು.

Click to comment

Leave a Reply

Your email address will not be published. Required fields are marked *