Crime
50 ರೂ. ಸಂಬಳದಿಂದ ಬೇಸತ್ತು ಮಾಲೀಕನ ಮಗನನ್ನೇ ಅಪಹರಿಸಿ ಕೊಂದ ಅಪ್ರಾಪ್ತರು!

ಲಕ್ನೋ: ಪ್ರತಿ ನಿತ್ಯ ಮಾಡುತ್ತಿದ್ದ ಕೆಲಸಕ್ಕೆ 30-50 ರೂ. ಸಂಬಳ ನೀಡುತ್ತಿದ್ದರಿಂದ ಬೇಸತ್ತ ಅಪ್ರಾಪ್ತರಿಬ್ಬರು ಮಾಲೀಕನ ಮಗನನ್ನೇ ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆದಿತ್ಯ(5) ಮೃತ ಬಾಲಕ. ಅಲಿಗರ್ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, 16 ವರ್ಷದ ಆರೋಪಿಗಳು ಹಿಂದಿ ಧಾರವಾಹಿಗಳಿಂದ ಪ್ರೇರಿತಗೊಂಡು ಕೃತ್ಯವೆಸಗಿದ್ದಾನೆ ಎಂಬ ಸತ್ಯ ಬಹಿರಂಗಗೊಂಡಿದೆ.
ಫೆಬ್ರವರಿ 13ರಂದು ಬಾಲಕ ಮನೆಯಿಂದ ಹೊರಗೆ ಆಟವಾಡುತ್ತಿದ್ದ ವೇಳೆ ಅಪಹರಣವಾಗಿದ್ದಾನೆ. ಆದಿತ್ಯನನ್ನು ಹುಡುಕುವಲ್ಲಿ ಅವರ ತಂದೆ ವಿಫಲವಾದಾಗ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಎರಡು ದಿನಗಳ ನಂತರ ಬಾಲಕ ಶವ ಗುಂಡಿಯೊಂದಲ್ಲಿ ಪತ್ತೆಯಾಗಿದೆ.
ಆರೋಪಿಗಳು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬಾಲಕನ ಮೃತದೇಹವನ್ನು ಪ್ಲಾಸ್ಟಿಕ್ ಚೀಲದೊಳಗೆ ತುಂಬಿ ಅರಣ್ಯ ಪ್ರದೇಶವೊಂದರಲ್ಲಿ ಗುಂಡಿಯೊಂದರಲ್ಲಿ ಹೂತು ಹಾಕಿದ್ದಾರೆ.
ಫೆಬ್ರವರಿ 14ರಂದು ಬಾಲಕನೊಬ್ಬನ ಶವ ಗುಂಡಿಯೊಂದರಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಈ ವಿಷಯ ತಿಳಿದ ಬಾಲಕನ ಕುಟುಂಬಸ್ಥರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಬಾಲಕನ ಮೃತದೇಹ ಗುಂಡಿಯೊಳಗೆ ಪತ್ತೆಯಾಗಿದೆ. ಈ ವೇಳೆ ಆರೋಪಿಗಳು ಬಾಲಕನ ಬಟ್ಟೆ ಮತ್ತು ಚಪ್ಪಲಿಯನ್ನು ಸುಡುವ ಪ್ರಯತ್ನ ಕೂಡ ಮಾಡಿದ್ದಾರೆ. ಅಲ್ಲದೆ ಆರೋಪಿಗಳು ಕೊಲೆ ಕುರಿತ ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಎಸ್ಪಿ(ಗ್ರಾಮೀಣ) ಶುಭಮ್ ಪಟೇಲ್ ಹೇಳಿದ್ದಾರೆ.
