Crime
ಸಾಲ ಮರುಪಾವತಿಸಲಾಗದೆ ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

– ಮೂರುದಿನಗಳಿಂದ ಕಾಣೆಯಾಗಿದ್ದ ರೈತ
– ಬ್ಯಾಂಕ್ ಅಧಿಕಾರಿಯ ಬೆದರಿಕೆಗೆ ಮನನೊಂದ ರೈತ
ಲಕ್ನೋ: ಬ್ಯಾಂಕ್ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದೆ ರೈತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಧುಲ್ಲಾ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು ಸುರೇಶ್ (45) ಎಂದು ಗುರುತಿಸಲಾಗಿದೆ. ಈ ರೈತ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿಸಲು ಇವರಿಗೆ ಸಾಧ್ಯವಾಗಿಲ್ಲ. ಆಗ ಬ್ಯಾಂಕ್ನ ಅಧಿಕಾರಿಯೊಬ್ಬರು ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಮೃತ ರೈತ ಸುರೇಶ್ ಕುಟುಂಬದವರು ಹೇಳುವ ಪ್ರಕಾರ ಕೆಲವು ವರ್ಷಗಳ ಹಿಂದೆ ರೈತ ಸುರೇಶ್ ಅವರು ಬ್ಯಾಂಕಿನಿಂದ 4 ರಿಂದ 5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಬೆಳೆ ಸರಿಯಾಗಿ ಬರದೆ ಇರುವ ಕಾರಣದಿಂದಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಬ್ಯಾಂಕ್ನ ಅಧಿಕಾರಿಯೊಬ್ಬರು ಸಾಲವನ್ನು ಮರುಪಾವತಿಸದಿದ್ದರೆ ಮನೆಗೆ ಬರುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಬ್ಯಾಕ್ ಅಧಿಕಾರಿ ಸಾಲ ಮರುಪಾವತಿಸಲು ಒತ್ತಡ ಹೇರಿದ ದಿನದಿಂದಲೂ ಒತ್ತಡದಲ್ಲಿದ್ದರು. ಮೂರು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು. ಆದರೆ ಇದೀಗ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ರಾರಾ ಗ್ರಾಮದ ಕಾಲುವೆಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮೃತ ರೈತ ಸುರೇಶ್ ಅವರ ಸಹೋದರ ಜಗದೀಶ್ ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
