Connect with us

Districts

ಸ್ನಾನಕ್ಕಾಗಿ ಹೊಳೆಯಲ್ಲಿ ಇಳಿದಿದ್ದ ಇಬ್ಬರು ಸಾವು

Published

on

ಕಾರವಾರ: ಸ್ನಾನಕ್ಕಾಗಿ ಹೊಳೆಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಓಣಿಕೇರಿ ಗ್ರಾಮದ ಸಮೀಪದಲ್ಲಿರುವ ಬಿಳಚಿಕಟ್ಟು ಬಳಿ ಕೆಂಗ್ರೆಹೊಳೆಯಲ್ಲಿ ಗುರುವಾರ ನಡೆದಿದೆ.

ಬೈಂದೂರು ಮೂಲದ ದಿನೇಶ್ (35) ಹಾಗೂ ಶಿರಸಿ ಮೂಲಕ ವಿನಾಯಕ್ (20) ಮೃತ ದುರ್ದೈವಿಗಳು. ಶಾಲ್ಮಲಾ ನದಿ ಪಾತ್ರದ ಕೆಂಗ್ರೆಹೊಳೆಯಲ್ಲಿ ದುರ್ಘಟನೆ ನಡೆದಿದೆ.

ಶಿರಸಿಯ ಕರಾವಳಿ ಹೋಟೆಲ್‍ನಲ್ಲಿ ದಿನೇಶ್ ಹಾಗೂ ವಿನಾಯಕ್ ಕೆಲಸ ಮಾಡುತ್ತಿದ್ದರು. ಶಿರಸಿಯಲ್ಲಿ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದರಿಂದ ಹೋಟೆಲ್ ಜಖಂಗೊಂಡಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ಮಾಲೀಕರ ಮನೆಗೆ ಹೋಗಿ ಊಟ ಮಾಡಿಕೊಂಡು ತಾವು ತಂಗಿದ್ದ ರೂಮ್‍ಗೆ ಬರುತ್ತಿದ್ದರು. ಮಾಲೀಕರ ಮನೆಯಲ್ಲಿ ಇಂದು ಮಧ್ಯಾಹ್ನ ಊಟ ಮಾಡಿಕೊಂಡು, ಸ್ನಾನ ಮಾಡಲು ಕೆಂಗ್ರೆಹೊಳೆಗೆ ಬಂದಿದ್ದರು. ಹೊಳೆಗೆ ಇಳಿದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೊಳೆಯ ಬಳಿಗೆ ಬಂದಿದ್ದ ಕೆಲ ಸ್ಥಳೀಯರಿಗೆ ದಡದ ಮೇಲೆ ಬಟ್ಟೆ ಹಾಗೂ ನೀರಿನಲ್ಲಿ ಎರಡು ಮೃತ ದೇಹಗಳು ತೇಲುತ್ತಿರವುದು ಕಂಡಿತ್ತು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು, ಮೃತ ದೇಹವನ್ನು ಹೊಳೆಯಿಂದ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.