Connect with us

International

ವೈಟ್‍ಹೌಸ್ ಮುಂದೆ ಉಗ್ರ ಪ್ರತಿಭಟನೆ: ಭೂಗತ ಬಂಕರ್‌ನಲ್ಲಿ ಅಡಗಿದ ಟ್ರಂಪ್

Published

on

ವಾಷಿಂಗ್ಟನ್: ಅಮೆರಿಕದಲ್ಲಿ ಜನರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರನ್ನು ಟ್ರಂಪ್ ಶ್ವೇತ ಭವನದ ನೆಲಮಹಡಿಯಲ್ಲಿರುವ ಭೂಗತ ಬಂಕರ್ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.

ಶುಕ್ರವಾರ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಶ್ವೇತಭವನದ ಮುಂಭಾಗದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ಟ್ರಂಪ್ ನೆಲಮಹಡಿ ಬಂಕರ್‌ಗೆ ತೆರಳಿದ್ದರು ಎಂದು ವರದಿಯಾಗಿದೆ.

ಎಲ್ಲಿದೆ?
ಶ್ವೇತಭವನದ ಪೂರ್ವ ಭಾಗದ ನೆಲಮಹಡಿಯಲ್ಲಿ ಈ ಬಂಕರ್ ನಿರ್ಮಾಣಗೊಂಡಿದೆ. ಇದನ್ನು ಅಧ್ಯಕ್ಷೀಯ ತುರ್ತು ಕಾರ್ಯಾಚರಣೆ ಕೇಂದ್ರ(Presidential Emergency Operations Center -PEOC) ಎಂದು ಕರೆಯಲಾಗುತ್ತದೆ. ತುರ್ತು ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರನ್ನು ರಕ್ಷಿಸಲೆಂದೇ ಈ ಬಂಕರ್ ನಿರ್ಮಾಣ ಮಾಡಲಾಗಿದೆ. ಎಲ್ಲ ಆಧುನಿಕ ಸಂವಹನ ಸಾಧನಗಳು ಬಂಕರ್ ನಲ್ಲಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಾಷಿಂಗ್ಟನ್ ಮೇಲೆ ವಾಯುದಾಳಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಅಧ್ಯಕ್ಷ ಫ್ರಾಂಕ್ಲಿನ್ ರೂಸ್‍ವೆಲ್ಟ್ ಈ ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು. 2001ರ ಸೆಪ್ಟೆಂಬರ್ 11 ರಂದು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್‍ಖೈದಾ ಉಗ್ರರಿಂದ ದಾಳಿ ನಡೆದ ಬಳಿಕ ಅಮೆರಿಕದ ಹಲವು ಕಚೇರಿಗಳು ಈ ಬಂಕರ್ ಗೆ ಶಿಫ್ಟ್ ಆಗಿತ್ತು.

ಪ್ರತಿಭಟನೆ ಯಾಕೆ?
ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬ ನಕಲಿ ನೋಟು ಚಲಾವಣೆಯ ಆರೋಪಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಕುತ್ತಿಗೆ ಮೇಲೆ ಮೊಣಕಾಲನ್ನು ಇರಿಸಿ ಹತ್ಯೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕ್ರೂರತ್ವಕ್ಕೆ ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಬಲಿಯಾಗಿದ್ದನ್ನು ಖಂಡಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅಮೆರಿಕದ ವಿವಿಧ ನಗರಗಳಲ್ಲಿ ಜಸ್ಟೀಸ್ ಫಾರ್ ಫ್ಲಾಯ್ಡ್, ಐ ಕಾಂಟ್ ಬ್ರೀತ್ ಹೆಸರಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ.

ಅನೇಕ ಕಡೆ ಪೊಲೀಸ್ ವಾಹನಗಳು, ರೆಸ್ಟೋರೆಂಟ್‍ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಆಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ. ಆದರೆ ಇದನ್ನು ಜನ ಲೆಕ್ಕಿಸುತ್ತಿಲ್ಲ. ಅಮೆರಿಕ ಸರ್ಕಾರ, ಫ್ಲಾಯ್ಡ್ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

ಮುಂಜಾಗ್ರತಾ ಕ್ರಮವಾಗಿ ಲಾಸ್ ಏಂಜಲೀಸ್, ಡೆನ್ವೆರ್, ಮಿಯಾಮಿ, ಅಟ್ಲಾಂಟಾ, ಚಿಕಾಗೋ, ಲೂಯಿಸ್‍ವಿಲ್ಲೆ, ಮಿನಿಯಾಪೊಲೀಸ್, ಸೈಂಟ್ ಪೌಲ್, ಕೊಲಂಬಸ್, ಫಿಲಿಡೆಲ್ಫಿಯಾ, ಸಿಯಾಟೆಲ್ ಸೇರಿ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನೆ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ಗಳನ್ನು  ಬಳಸಲಾಗುತ್ತಿದೆ.