Connect with us

Hassan

ಮತ ಎಣಿಕೆ 1 ದಿನ ಪೂರ್ಣಗೊಂಡರೂ ಇನ್ನೂ ಅಮೆರಿಕದ ಫಲಿತಾಂಶ ಪ್ರಕಟವಾಗಿಲ್ಲ ಯಾಕೆ?

Published

on

ವಾಷಿಂಗ್ಟನ್: ಇಡೀ ವಿಶ್ವದ ಕಣ್ಣು ಅಮೆರಿಕ ಚುನಾವಣೆಯನ್ನು ನೋಡುತ್ತಿದೆ. ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ನಡುವೆ ಭಾರೀ ಸ್ಪರ್ಧೆ ನಡೆಯುತ್ತಿದೆ. ಚುನಾವಣೆ ಮತ ಎಣಿಕೆ ಒಂದು ದಿನ ಕಳೆದರೂ ಇನ್ನೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ. ಭಾರತದಲ್ಲಿ ಮತ ಎಣಿಕೆ ಆರಂಭವಾದ ಆರಂಭದಲ್ಲೇ ಟ್ರೆಂಡ್ ತಿಳಿದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುತ್ತದೆ. ಹೀಗಿರುವಾಗ ಮುಂದುವರಿದ ದೇಶ, ವಿಶ್ವದ ದೊಡ್ಡಣ್ಣ ಎಂದು ಅಮೆರಿಕವನ್ನು ಕರೆಯುತ್ತಿರುವಾಗ ಫಲಿತಾಂಶ ಯಾಕೆ ಇನ್ನೂ ಘೋಷಣೆಯಾಗಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಎರಡು ಉತ್ತರವನ್ನು ನೀಡಬಹುದು. ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಇದರ ಜೊತೆಯಲ್ಲಿ ಕೋವಿಡ್ 19 ಕಾರಣದಿಂದ ಈ ಬಾರಿ ಅತಿ ಹೆಚ್ಚು ಅಂಚೆ ಮತದಾನ ನಡೆದಿದೆ.

ಈ ಬಾರಿ ಶೇ.65 ರಷ್ಟು ಮತದಾನ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಯಾಕೆಂದರೆ ಕೆಲ ರಾಜ್ಯಗಳಲ್ಲಿ ಪೋಸ್ಟಲ್ ವೋಟಿಂಗ್ ಮಾಡಲು ನ.13ರವರೆಗೆ ಅವಕಾಶವಿದೆ. ಹೀಗಾಗಿ ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಅತಿ ಹೆಚ್ಚಿನ ಮತದಾನ ನಡೆಯುವ ಮೂಲಕ ದಾಖಲೆ ಬರೆದಿದೆ. ಈ ಹಿಂದೆ 2016ರಲ್ಲಿ ಶೇ.60.1, 2012ರಲ್ಲಿ ಶೇ.58.6, 2008ರಲ್ಲಿ ಶೇ.61.6 ರಷ್ಟು ಮತದಾನ ನಡೆದಿತ್ತು.

ಕೋವಿಡ್ 19 ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸಂಖ್ಯೆಯ ಜನ ಅಂಚೆ ಮತದಾನ ಮಾಡಿದ್ದಾರೆ. ಈ ಬಾರಿ ಒಟ್ಟು 8 ಕೋಟಿಯಷ್ಟು ಅಂಚೆ ಮತದಾನ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆ ಅಮೆರಿಕದ ಒಂದೊಂದು ರಾಜ್ಯಗಳು ಒಂದೊಂದು ಚುನಾವಣೆಗೆ ಒಂದೊಂದು ದಿನಾಂಕವನ್ನು ನಿಗದಿ ಮಾಡಿವೆ.

ಉದಾಹರಣೆಗೆ ಅರಿಜೋನಾದದಲ್ಲಿ ಅಕ್ಟೋಬರ್ 7 ರಿಂದ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು ನ.3ರವರೆಗೆ ಮತದಾನ ಮಾಡಬಹುದು ಎಂದು ಹೇಳಿತ್ತು. ಅಷ್ಟೇ ಅಲ್ಲದೇ ಅಕ್ಟೋಬರ್ 20 ರಿಂದಲೇ ಮತ ಎಣಿಕೆಯನ್ನು ಆರಂಭಿಸಿದೆ. ಒಹಿಯೋದಲ್ಲಿ ಅಕ್ಟೋಬರ್ 6 ರಿಂದ ಮತದಾನ ಆರಂಭವಾಗಿದ್ದು, ನವೆಂಬರ್ 13ರವರೆಗೆ ಮತದಾನ ಮಾಡಬಹುದು ಎಂದು ತಿಳಿಸಿದೆ. ಈ ಕಾರಣಕ್ಕಾಗಿ ಚುನಾವಣೆ ಫಲಿತಾಂಶ ಬರಲು ತಡವಾಗುತ್ತಿದೆ.

ಭಾರತದಲ್ಲಿ ಚುನಾವಣಾ ಆಯೋಗ ಸಂಪೂರ್ಣವಾಗಿ ಚುನಾವಣೆಯನ್ನು ನೋಡಿಕೊಳ್ಳುತ್ತದೆ. ಆದರೆ ಅಮೆರಿಕದಲ್ಲಿ ರಾಜ್ಯದ ಕಾರ್ಯದರ್ಶಿಗಳು ಚುನಾವಣೆಯ ಹೊಣೆಯನ್ನು ಹೊರುತ್ತಾರೆ. ಈ ಕಾರ್ಯದರ್ಶಿಗಳನ್ನು ಜನರಿಂದ ಆಯ್ಕೆಯಾದ ಗವರ್ನರ್‌ಗಳು ನೇಮಕ ಮಾಡುತ್ತಾರೆ. ಸಾಧಾರಣವಾಗಿ ಈ ಕಾರ್ಯದರ್ಶಿಗಳು ಗವರ್ನರ್ ಪರವಾಗಿ ಕೆಲಸ ಮಾಡುವ ಕಾರಣ ಒಂದೊಂದು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯ ದಿನಾಂಕಗಳು ಬದಲಾಗಿವೆ.

ಮತ ಎಣಿಕೆಗೂ ಮತದಾರರ ಸಹಿಯನ್ನು ಚೆಕ್ ಮಾಡಬೇಕು, ದಾಖಲೆ ಪರಿಶೀಲಿಸಬೇಕು. ಅಷ್ಟೇ ಅಲ್ಲದೇ ಬ್ಯಾಲೆಟ್ ಸ್ಕ್ಯಾನ್ ಮಾಡಬೇಕು. ಈ ಪ್ರಕ್ರಿಯೆ ದೀರ್ಘ. ಈಗ ಅಮರಿಕ ಚುನಾವಣೆ ಫಲಿತಾಂಶ ಅಧಿಕೃತ ಫಲಿತಾಂಶದ ಮಾಹಿತಿಯಲ್ಲ. ಈಗ ನೀಡುತ್ತಿರುವುದು ಮಾಧ್ಯಮಗಳ ವರದಿ ಅಷ್ಟೇ.

ಭಾರತದಲ್ಲಿ ಹೇಗೆ?
ಭಾರತದಲ್ಲಿ ಚುನಾವಣಾ ಆಯೋಗ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುತ್ತದೆ. ಭದ್ರತೆಯ ದೃಷ್ಟಿಯಿಂದ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಲೋಕಸಭಾ ಚುನಾವಣೆ ಒಂದೊಂದು ರಾಜ್ಯದಲ್ಲಿ ಒಂದೊಂದು ದಿನ ನಡೆದರೂ ಅಂತಿಮವಾಗಿ ಮತ ಎಣಿಕೆ ಒಂದೇ ದಿನ ನಡೆಯುತ್ತದೆ.

 

 

ಭಾರತದಲ್ಲಿ ಚುನಾವಣಾ ಕರ್ತವ್ಯ ನಿರತ ಸರ್ಕಾರಿ ಸಿಬ್ಬಂದಿ, ಸೈನಿಕರು, ಅಧಿಕಾರಿಗಳಿಗೆ ಮಾತ್ರ ಅಂಚೆ ಮಾತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಉಳಿದ ಮತದಾರರು ನಿಗದಿ ಮಾಡಿದ ಮತಗಟ್ಟೆಗೆ ಆಗಮಿಸಿ ಇವಿಎಂ ಮೂಲಕ ಮತವನ್ನು ಚಲಾಯಿಸುತ್ತಾರೆ. ಮತ ಸರಿಯಾದ ಅಭ್ಯರ್ಥಿಗೆ  ಬಿದ್ದಿದೆ ಎಂಬುದನ್ನು ವಿವಿಪ್ಯಾಟ್ ಮೂಲಕ ಮತದಾರ ಖಚಿತ ಪಡಿಸಬಹುದು.

ಫಲಿತಾಂಶದ ದಿನ ಆರಂಭದಲ್ಲಿ ಅಂಚೆ ಮತ ಎಣಿಕೆ ನಡೆಯುತ್ತದೆ. ಬಳಿಕ ಇವಿಎಂ ಮತ ಎಣಿಕೆ ಮಾಡಲಾಗುತ್ತದೆ. ಇವಿಎಂ ಮೂಲಕ ಚುನಾವಣೆ ನಡೆದಿರುವ ಕಾರಣ ಕೆಲವೇ ನಿಮಿಷದಲ್ಲಿ ಒಂದು ಬೂತ್ ಮತ ಎಣಿಕೆ ನಡೆಯುತ್ತದೆ. ಅಂತಿಮವಾಗಿ ಯಾವುದಾದರು ಎರಡು ಅಥವಾ ಮೂರು ಮತಗಟ್ಟೆಯ ವಿವಿಪ್ಯಾಟ್ ಎಣಿಕೆ ಮಾಡಿ ಬಿದ್ದಿರುವ ಮತಕ್ಕೂ ವಿವಿಪ್ಯಾಟ್‍ನಲ್ಲಿ ಪ್ರಿಂಟ್ ಆಗಿರುವ ಸ್ಲಿಪ್‍ಗೂ ತಾಳೆ ಮಾಡಿ ಮತ ಎಣಿಕೆ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ.

Click to comment

Leave a Reply

Your email address will not be published. Required fields are marked *

www.publictv.in