Connect with us

Corona

ಜೈವಿಕ ಅಸ್ತ್ರ ಕೊರೊನಾ – ಚೀನಾ ವಿರುದ್ಧ 20 ಲಕ್ಷ ಕೋಟಿ ಡಾಲರ್ ಕೇಸ್ ದಾಖಲು

Published

on

ವಾಷಿಂಗ್ಟನ್: ಕೊರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕದ ನಡುವೆ ವಾಕ್ಸಮರ ನಡೆಯುತ್ತಿದೆ. ಆದರೆ ಅಮೆರಿಕದ ವಕೀಲರೊಬ್ಬರು ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ವಕೀಲ ಲ್ಯಾರಿ ಕ್ಲೇಮನ್ ಹಾಗೂ ಅವರ ಫ್ರೀಡಮ್ ವಾಚ್ ಸಂಸ್ಥೆ, ಟೆಕ್ಸಾಸ್ ನ ಬಝ್ ಫೋಟೋಸ್ ಎಂಬ ಕಂಪೆನಿಯ ಜತೆಗೂಡಿ ಚೀನಾ ಸರ್ಕಾರ, ಚೀನಾ ಸೇನೆ, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ಅದರ ನಿರ್ದೇಶಕ ಶಿ ಝೆಂಗ್ಲಿ, ಚೀನಾ ಸೇನೆಯ ಮೇ.ಜ. ಚೆನ್ ವೈ ವಿರುದ್ಧ 20 ಲಕ್ಷಕೋಟಿ ಡಾಲರ್ ಕೇಸ್ ದಾಖಲಿಸಿದ್ದಾರೆ.

ಭಯೋತ್ಪಾದಕರಿಗೆ ನೆರವು, ಅಮೆರಿಕದ ನಾಗರಿಕರ ಸಾವು ಹಾಗೂ ನಷ್ಟವನ್ನುಂಟುಮಾಡುವ ಸಂಚು, ನಿರ್ಲಕ್ಷ್ಯ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ. 20 ಲಕ್ಷ ಕೋಟಿ ಚೀನಾದ ಜಿಡಿಪಿಗಿಂತಲೂ (ಒಟ್ಟು ದೇಶೀಯ ಉತ್ಪನ್ನ) ಹೆಚ್ಚಿನದ್ದಾಗಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

ಜನಸಮೂಹವನ್ನು ಕೊಲ್ಲಲೆಂದೇ ಉದ್ದೇಶಪೂರ್ವಕವಾಗಿ ಈ ಜೈವಿಕ ಅಸ್ತ್ರವನ್ನು ವುಹಾನ್ ವೈರಾಲಜಿ ಸಂಸ್ಥೆಯಿಂದಲೇ ಬಿಡುಗಡೆ ಮಾಡಲಾಗಿದೆ. ಅಮೆರಿಕದ ಜೊತೆ ತನ್ನ ಶತ್ರು ದೇಶಗಳ ಪ್ರಜೆಗಳನ್ನು ಹತ್ಯೆ ಮಾಡಲೆಂದು ಚೀನಾ ಈ ವೈರಸನ್ನು ಮೊದಲೇ ಸಿದ್ಧಪಡಿಸಿಕೊಂಡಿತ್ತು. ಆದರೆ ಯಾವುದೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳದೇ ಅಂತಾರಾಷ್ಟ್ರೀಯ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಚೀನಾ ಈ ವೈರಸ್ ಬಿಡುಗಡೆ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಕೊರೊನಾವನ್ನು ‘ಚೈನಿಸ್ ವೈರಸ್’ ಎಂದು ಕರೆದರೆ ಚೀನಾದ ಅಧಿಕಾರಿ ಇದು ಅಮೆರಿಕದವರು ಬಿಡುಗಡೆ ಮಾಡಿದ ವೈರಸ್ ಎಂದು ಆರೋಪಿಸುತ್ತಿದ್ದಾರೆ. ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಚೀನಾವನ್ನು ಮಣಿಸಲು ಅಮೆರಿಕದ ಯೋಧರು ವುಹಾನ್ ನಲ್ಲಿ ಈ ವೈರಸ್ ಬಿಡುಗಡೆ ಮಾಡಿರಬಹುದು ಎಂಬ ಆರೋಪ ಮಾಡುತ್ತಿದ್ದಾರೆ.

ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಗರಂ ಆಗಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಅವರು ಅಮೆರಿಕಕ್ಕೆ ಖಾರವಾದ ಪ್ರಶ್ನೆಗಳನ್ನು ಕೇಳಿದ್ದರು.

ಅಮೆರಿಕದಲ್ಲಿ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ? ಯಾವ ಆಸ್ಪತ್ರೆಯಲ್ಲಿ ಪೀಡಿತರು ದಾಖಲಾಗಿದ್ದಾರೆ. ಅಮೆರಿಕದ ಸೈನಿಕರು ವುಹಾನ್ ನಲ್ಲಿ ಈ ಮಾರಣಾಂತಿಕ ವೈರಸ್ ತಂದಿರಬಹುದು. ಈ ವಿಚಾರದಲ್ಲಿ ನೀವು ಪಾರದರ್ಶಕವಾಗಿ ನಡೆದುಕೊಳ್ಳಿ. ಸಾರ್ವಜನಿಕವಾಗಿ ಡೇಟಾವನ್ನು ಬಿಡುಗಡೆ ಮಾಡಿ. ನಾವು ಮಾಹಿತಿಗಳನ್ನು ತಿಳಿಸಿದಂತೆ ನೀವು ಯಾಕೆ ತಿಳಿಸುತ್ತಿಲ್ಲ ಎಂದು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದರು.

ಅಮೆರಿಕ ಚೀನಾವನ್ನು ದೂರುವ ಬದಲು ಕೊರೊನಾ ವೈರಸ್ ತಡೆಗಟ್ಟಲು ಕ್ರಮಕೈಗೊಳ್ಳಲಿ. ನಮ್ಮನ್ನು ದೂರುವುದರಿಂದ ಅಮೆರಿಕದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.