Connect with us

Crime

ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

Published

on

– ಪೊಲೀಸರ ನಡೆಗೆ ತೀವ್ರ ಆಕ್ರೋಶ

ಲಕ್ನೊ: ಕಾಮುಕರ ಅಟ್ಟಹಾಸದಿಂದ ಬಲಿಯಾದ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ ರಾತ್ರೋ-ರಾತ್ರಿ ನೆರೆವೇರಿಸಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಎರಡು ವಾರಗಳ ಅಂದರೆ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದಾರೆ. ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರನ್ನು ಅವರ ಮನೆಯಲ್ಲೇ ಕೂಡಿಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಈ ವೇಳೆ ಯುವತಿ ಕುಟುಂಬ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಮಗಳ ಮುಖವನ್ನು ನೋಡಲು ಬಿಡದಿದ್ದರಿಂದ ಉದ್ರಿಕ್ತರಾದ ಕುಟುಂಬಸ್ಥರು, ಅಂಬುಲೆನ್ಸ್ ಮೇಲೆ ಮರದ ತುಂಡುಗಳನ್ನು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೂ ಪೊಲೀಸರು ಮಾತ್ರ ಕ್ಯಾರೇ ಎನ್ನದೇ ಮೃತದೇಹವನ್ನು ತೆಗೆದುಕೊಂಡು ಹೋಗಿ ತಾವೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದರಿಂದ ಯುವತಿಯ ಕುಟುಂಬಸ್ಥರು ಅಸಹಾಯಕರಾಗಿ ಕಣ್ಣೀರಿಟ್ಟಿದ್ದಾರೆ.

2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಮಾದರಿಯಲ್ಲಿಯೇ ಉತ್ತರಪ್ರದೇಶದ ಹುತ್ರಾಸ್ ನಲ್ಲಿ ನಡೆದಿದೆ. ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ನಿನ್ನೆ ಮೃತಪಟ್ಟಿದ್ದರು.

ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದಾರೆ.

ಹಿಂದೂ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರ ಮಾಡಬೇಕು ಎಂದು ಬಯಸಿದ್ದೆವು. ಇತ್ತ ನಾವು ಪ್ರತಿಭಟನೆಯಲ್ಲಿ ತೊಡಗಿದ್ದಾಗ, ಅತ್ತ ಸಹೋದರಿಯ ಅಂತ್ಯಸಂಸ್ಕಾರವನ್ನು ಪೊಲೀಸರು ಮುಗಿಸಿಯೇ ಬಿಟ್ಟಿದ್ದಾರೆ. ಅವರು ಒತ್ತಾಯಪೂರ್ವಕವಾಗಿ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಮಗಳ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ ಅಂತ ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ.

ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಗ್ರಾಮಕ್ಕೆ ಮಧ್ಯರಾತ್ರಿ ಯುವತಿಯ ಶವವನ್ನು ತೆಗೆದುಕೊಂಡು ಹೋಗಿ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆದರೆ ಮಧ್ಯರಾತ್ರಿ ಅಂತ್ಯಕ್ರಿಯೆ ಮಾಡುವುದು ನಮ್ಮ ಸಂಪ್ರದಾಯವಲ್ಲ. ಮೃತದೇಹ ನಮಗೆ ನೀಡಿ, ಬೆಳಗ್ಗೆ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಮನವಿ ಮಾಡಿಕೊಂಡರೂ ಪೊಲೀಸರು ಒಪ್ಪಲಿಲ್ಲ ಎಂದು ಹೇಳುತ್ತಾ ಗಳಗಳನೇ ಅತ್ತುಬಿಟ್ಟರು.

ಗ್ರಾಮದಲ್ಲಿ ಯುವತಿಯ ಸಂಬಂಧಿಕರು ವಾಹನಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ಇನ್ನೂ ಒಂದು ಹೆಜ್ಜೆ ಹೋದ ಮಹಿಳೆಯೊಬ್ಬರು ನಡುರಸ್ತೆಯಲ್ಲಿಯೇ ಕುಳಿತುಕೊಂಡು ಎದೆಗೆ ಹೊಡೆದುಕೊಂಡು ತನ್ನ ಆಕ್ರೋಶ ಹೊರಹಾಕಿದರು. ಈ ಮಹಿಳೆಯನ್ನು ಮೃತ ಯುವತಿಯ ತಾಯಿಯೆಂದು ಅಂದಾಜಿಸಲಾಗಿದೆ.

ನಸುಕಿನ ಜಾವ 2.30ರ ಸುಮಾರಿಗೆ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಪೊಲೀಸರು ಮಾತ್ರ ಸ್ಥಳದಲ್ಲಿದ್ದರು. ಪತ್ರಕರ್ತರಿಗೂ ನಿರ್ಬಂಧ ಹೇರಿದ್ದರು. ಮೃತದೇಹ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಪೊಲೀಸರು ಕ್ಯಾರೇ ಎನ್ನದೇ ತಾವೇ ಎಲ್ಲ ಕಾರ್ಯಗಳನ್ನು ಮುಗಿಸಿಬಿಟ್ಟರು ಎಂದು ಗದ್ಗದಿತರಾದರು. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *