Tuesday, 15th October 2019

Recent News

ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

ವಾರಣಾಸಿ: ವಾರಣಾಸಿಯಿಂದ 26 ಕಿ.ಮಿ ದೂರದಲ್ಲಿರುವ ಬಾಬತ್‍ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ತನ್ನ ರನ್‍ವೇ ಕೆಳಗಡೆ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ.

ಈ ಮೂಲಕ ರನ್‍ವೇ ಕೆಳಗೆ ಅಂಡರ್ ಪಾಸ್ ಹೈವೇ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಈ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಅಂಡರ್‍ಪಾಸ್ ರಸ್ತೆ ನಿರ್ಮಾಣವು ವಿಮಾನಗಳ ರನ್‍ವೇಯನ್ನು, ವಿಮಾನಗಳ ನಿಲ್ದಾಣ ಪಥ ಹಾಗು ಹೆದ್ದಾರಿಯನ್ನು ನಾಲ್ಕು ರಸ್ತೆಗಳಾಗಿ ಪರಿವರ್ತಿಸುತ್ತದೆ.

ಅಂಡರ್‍ಪಾಸ್ ರಸ್ತೆಗಳ ನಿರ್ಮಾಣ ಹಾಗೂ ವಿಮಾನಗಳ ರನ್‍ವೇ ವಿಸ್ತರಣೆ ಕಾರ್ಯ ವಾರಣಾಸಿ-ಲಖ್ನೋ ರಾಷ್ಟ್ರೀಯ ಹೆದ್ದಾರಿ 56 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದೆ. ಈಗಿರುವ ರನ್‍ವೇ 2750 ಮೀ. ಗಳಾಗಿದ್ದು ಸರಕು ಸಾಗಾಣಿಕೆ ಹಾಗೂ ಬೋಯಿಂಗ್ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ 4075ಮೀ ಗೆ ವಿಸ್ತರಿಸಬೇಕೆಂದು ಪ್ರಸ್ತಾಪಿಸಿದೆ. ಅದರಂತೆಯೇ ಈ ರನ್‍ವೇ ಹಾಗೂ ಅಂಡರ್‍ಪಾಸ್ ಕಾಮಗಾರಿಗಳೆರೆಡೂ ಏಕಕಾಲಕ್ಕೆ ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕ್ರಿಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕುರಿತಂತೆ ಇರುವ ದೀರ್ಘಾವಧಿ ಸಮಸ್ಯೆಗಳು ಪರಿಹಾರವಾಗಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಇರುವ ಹೆದ್ದಾರಿಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್.ಬಿ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 56 ನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ 2013 ರಲ್ಲಿ ಅನುಮತಿ ನೀಡಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೆದ್ದಾರಿ ಪ್ರಾಧಿಕಾರವೂ ವಾರಣಾಸಿ- ಸುಲ್ತಾನ್‍ಪುರ ಗಳಲ್ಲಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಪೂರ್ಣಗೊಳಿಸಲಾಗಲಿಲ್ಲ.  2014ರಲ್ಲಿ ಕೇಂದ್ರದಲ್ಲಾದ ಸಿಬ್ಬಂದಿ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆಗಳಿಂದಾಗಿ ಕಾಮಗಾರಿ ಭರದಿಂದ ಸಾಗಿದೆ.

2014ರ ಮಾರ್ಚ್ 27 ರಂದು ನಾಗರಿಕ ವಿಮಾನಯಾನ ನಿರ್ದೇಶಕರು ಉತ್ತರ ಪ್ರದೇಶ ಸರಕಾರಕ್ಕೆ ಈ ಕುರಿತು ಪತ್ರವೊಂದನ್ನು ಕಳುಹಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. 2017 ರಲ್ಲಿ ಪ್ರಾಧಿಕಾರವು ಕಾಮಗಾರಿಗೆ ಅಗತ್ಯ ಭೂಮಿಯನ್ನು ಗುರುತಿಸಿದ ನಂತರ ಈಗ ಕಾಮಗಾರಿ ವೇಗವನ್ನು ಪಡೆದಿದೆ.

Leave a Reply

Your email address will not be published. Required fields are marked *