Wednesday, 11th December 2019

ಅಯೋಧ್ಯೆ ತೀರ್ಪು ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ – ಅಮಿತ್ ಶಾ

ರಾಂಚಿ: ಅಯೋಧ್ಯೆ ತೀರ್ಪು ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‍ನ ಲತೇಹಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಅಯೋಧ್ಯೆ ವಿಚಾರಣೆಯನ್ನು ವಿಳಂಬಗೊಳಿಸಲು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದೆ. ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕೇ ಬೇಡವೇ? ನೀವೇ ಹೇಳಿ. ಆದರೆ ಈ ಪ್ರಕರಣವನ್ನು ಮುಂದುವರಿಸಲು ಕಾಂಗ್ರೆಸ್ ಬಿಟ್ಟಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಭವ್ಯ ದೇವಾಲಯ ನಿರ್ಮಿಸಲು ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ ಎಂದರು.

ಬುಡಕಟ್ಟು ಜನಾಂಗದವರ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ನಾನು ಕೇಳಲು ಬಯಸುತ್ತೇನೆ, ಕಳೆದ 70 ವರ್ಷಗಳಲ್ಲಿ ಬುಕಟ್ಟು ಜನಾಂಗದವರಿಗೆ ನೀವು ಏನು ಮಾಡಿದ್ದೀರಿ? ಈ ನಿಟ್ಟಿನಲ್ಲಿ ನೀವು ಚಿಂತಿಸಿದ್ದೀರಾ? ನಾವು ಪ್ರತಿ ಆದಿವಾಸಿ ಬ್ಲಾಕ್‍ನಲ್ಲಿ ಏಕಲವ್ಯ ಶಾಲೆಗಳನ್ನು ತೆರೆದಿದ್ದೇವೆ. ಅಲ್ಲದೆ ಮೋದಿಜಿ ಜಿಲ್ಲಾ ಮಿನರಲ್ ಫಂಡ್ ಸಹ ಸ್ಥಾಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಪುನರ್ ಆಯ್ಕೆ ಮಾಡುವಂತೆ ಅಮಿತ್ ಶಾ ಇದೇ ವೇಳೆ ಮನವಿ ಮಾಡಿದರು. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ರಘುಬರ್ ದಾಸ್ ಜಾರ್ಖಂಡ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಬಡವರ ಅನುಕೂಲಕ್ಕಾಗಿ ಏನೂ ಮಾಡಿಲ್ಲ ಎಂದು ದೂರಿದರು

ಜಾರ್ಖಂಡ್‍ನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20ರ ವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 23ರಂದು ನಡೆಯಲಿದೆ.

ಅಯೋಧ್ಯೆ ವಿವಾದ ಪ್ರಕರಣದ ತೀರ್ಪನ್ನು ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ವಿವಾದಿತ ಸ್ಥಳದಲ್ಲಿ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ವಹಿಸಿದೆ. ಅಲ್ಲದೆ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Leave a Reply

Your email address will not be published. Required fields are marked *