Saturday, 15th June 2019

ಪೊಲೀಸ್ ವಾಹನದ ಮುಂದೇ ಧರಣಿ ಕುಳಿತ ಉಮೇಶ್ ಜಾಧವ್

– ‘ಕೈ’ ಮುಖಂಡರಿಂದ ಮತದಾರರಿಗೆ ಹಣ ಹಂಚಿಕೆ

ಕಲಬುರಗಿ: ಮತದಾರರಿಗೆ ಹಣ ಹಂಚಲು ಬಂದ ಚಿತ್ತಾಪುರ ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯ ನಾಮದೇವ್ ರಾಠೋಡನನ್ನು ಪೊಲೀಸರು ವಶಕ್ಕೆ ಪಡೆದು ಬಿಡಲಾಗಿದೆ. ಇನ್ನು ಈ ಸಂದರ್ಭದಲ್ಲಿ ಪೊಲೀಸರ ನಡೆ ಖಂಡಿಸಿ ಮಾಜಿ ಶಾಸಕ ಉಮೇಶ್ ಜಾಧವ್ ಪೊಲೀಸ್ ವಾಹನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ರೌಡಿಗಳನ್ನು ಕ್ಷೇತ್ರದಲ್ಲಿ ಕರೆತಂದು ಹಣ ಹಂಚಿಕೆ ಮಾಡುತ್ತಿದ್ದಾರೆ. ನಮ್ಮ ಮತದಾರರಿಗೆ ಬಿಜೆಪಿಗೆ ಮತ ಹಾಕದಂತೆ ಬೆದರಿಕೆ ಹಾಕಲಾಗುತ್ತಿದೆ. ಹೀಗಿದ್ದರೂ ಪೊಲೀಸರು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ತಾಲೂಕು ಪಂಚಾಯಿತಿ ಸದಸ್ಯನನ್ನು ಕೇಳಿದರೆ, ನಾನು ಹಣ ಹಂಚಲು ಬಂದಿಲ್ಲ.ನಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ಹೋಗುತ್ತಿರುವುದ್ದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಕಲಬುರಗಿ ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇದಕ್ಕೂ ಮುನ್ನ ಚಿಂಚೋಳಿಯ ಬೇಡಸೂರ ತಾಂಡಾದಲ್ಲಿ ಮತದಾನದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಜಾಧವ್, ಮೇ 23 ರ ನಂತರ ರಾಜರಾಜಕಾರಣದಲ್ಲಿ ಭೂಕಂಪ ಆಗುತ್ತದೆ. ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸ ನೋಡಿ ನನ್ನ ಮಗ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ನನ್ನ ಬಗ್ಗೆ ಕೀಳಾಗಿ ಮಾತನಾಡಿ ಅವರ ಸಂಸ್ಕೃತಿಯನ್ನ ತೋರಿಸಿದ್ದಾರೆ. ಹೀಗಾಗಿ ಇದನೆಲ್ಲ ನೋಡಿಕೊಂಡು ಚಿಂಚೋಳಿ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *