LatestNational

ಶಾಲಾ ಮಕ್ಕಳ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ- ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಪ್ರಾಧಿಕಾರ

ನವದೆಹಲಿ: ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ಆಧಾರ್ ಕಾರ್ಡ್ ಅನ್ನು ಶಿಕ್ಷಣ ಸಂಸ್ಥೆಗಳು ಕೇಳಬಾರದೆಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಶಾಲಾ ಪ್ರವೇಶಕ್ಕೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ. ಅಲ್ಲದೇ ಶಾಲೆಗಳೂ ಸಹ ಆಧಾರ್ ಕೊಡಲೇಬೇಕೆಂದು ಕಡ್ಡಾಯಗೊಳಿಸುವಂತಿಲ್ಲ. ಒಂದು ವೇಳೆ ಶಿಕ್ಷಣ ಸಂಸ್ಥೆಗಳು ಈ ರೀತಿ ನಡೆದುಕೊಂಡರೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಯುಐಡಿಎಐ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಭೂಷಣ್, ಈಗಾಗಲೇ ಬಹುತೇಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲುಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗೆ ಮಾಡುವುದು ತಪ್ಪು ಹಾಗೂ ನ್ಯಾಯಾಂಗ ನಿಂದನೆಯಾಗುತ್ತದೆ. ಅಲ್ಲದೇ ಆಧಾರ್ ಇಲ್ಲವೆಂಬ ಮಾತ್ರಕ್ಕೆ ಯಾವುದೇ ಮಗುವಿನ ಪ್ರವೇಶಕ್ಕೆ ನಿರಾಕರಣೆ ಮಾಡುವಂತಿಲ್ಲವೆಂದು ಹೇಳಿದ್ದಾರೆ.

ಈಗಾಗಲೇ ದೆಹಲಿಯ 1,500ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ನರ್ಸರಿ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ದಾಖಲೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಈ ನಿರ್ಧಾರ ತೆಗೆದುಕೊಂಡಿದೆ.

ಸುಪ್ರೀಂ ಹೇಳಿದ್ದೇನು?
ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ತೆರೆದಿತ್ತು. ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಅಶೋಕ್‍ಭೂಷಣ್ ಅವರನ್ನು ಒಳಗೊಂಡಿದ್ದ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಎತ್ತಿ ಹಿಡಿದಿತ್ತು.

ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದರೆ ಸಂವಿಧಾನವನ್ನೇ ವಿರೋಧಿಸಿದಂತೆ ಎಂದು ಪೀಠ ತಿಳಿಸಿತ್ತು.

ಯಾವುದಕ್ಕೆ ಆಧಾರ್ ಬೇಕು..?
1. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ.
2. ಪ್ಯಾನ್, ಆದಾಯ ತೆರಿಗೆ (ಐಟಿ ರಿಟರ್ನ್ಸ್), ಆಸ್ತಿ ಖರೀದಿಗೆ ಆಧಾರ್ ಕಡ್ಡಾಯ.
3. ಪ್ಯಾನ್ ನಂಬರ್ ಗೆ ಅಧಾರ್ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು.
4. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಸಲ್ಲಿಸುವುದು.

ಯಾವುದಕ್ಕೆ ಬೇಡ..?
1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಪ್ ಗಳಿಗೆ ಕಡ್ಡಾಯವಲ್ಲ.
7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button