Saturday, 25th January 2020

ಶಿರ್ವ ಚರ್ಚ್ ಫಾದರ್ ಡೆನ್ನಿಸ್‍ಗೆ ಜೀವ ಬೆದರಿಕೆ, 15ಮಂದಿ ವಿರುದ್ಧ ದೂರು ದಾಖಲು

ಉಡುಪಿ: ಶಿರ್ವ ಚರ್ಚಿನ ಸಹಾಯಕ ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಸಂಬಂಧ ಚರ್ಚಿನ ಪ್ರಧಾನ ಫಾದರ್ ಡೆನ್ನಿಸ್ ಡೇಸಾ ಅವರಿಗೆ ಜೀವ ಬೆದರಿಕೆ ಬಂದಿದೆ. ಈ ಸಂಬಂಧ ಫಾದರ್ ಡೆನ್ನಿಸ್ ಅವರು 15 ಜನರ ವಿರುದ್ಧ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫಾದರ್ ಮಹೇಶ್ ಡಿಸೋಜಾ ಅವರ ಬೆಂಬಲಿಗರು ನವೆಂಬರ್ 2 ಮತ್ತು 3ರಂದು ಶಿರ್ವ ಚರ್ಚ್ ಆವರಣದಲ್ಲಿ ಪ್ರತಿಭಟಾನೆ ನಡೆಸಿದ್ದರು. ಈ ವೇಳೆ ಫಾದರ್ ಡೆನ್ನಿಸ್ ಡೇಸಾ ಅವರಿಗೆ ಪ್ರತಿಭಟನಾಕಾರರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಕಾಪು ತಾಲೂಕಿನ ಶಿರ್ವ ಗ್ರಾಮದ ಶಿರ್ವ ಸಾವುದ್ ಅಮ್ಮನವರ ಚರ್ಚಿನ ದಫನ್ ಭೂಮಿಯ ಎದುರುಗಡೆ ಡೆನ್ನಿಸ್ ಡೇಸಾ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಪದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಫಾದರ್ ಡೆನ್ನಿಸ್ ಡೇಸಾ ಅವರು ಸುನಿಲ್ ಕಾಬ್ರಾಲ್, ಜಾನ್ಸನ್ ಡಾಲ್ಪ್ರೆಡ್ ಕ್ಯಾಸ್ತಲಿನೋ, ಕೋನಾರ್ಡ್ ಕ್ತಾಸ್ತಲಿನೋ, ಪೀಟರ್ ಕೋರ್ಡಾ, ರಾಯನ್ ಮೆನೆಜಸ್, ಮರಾಯನ್ ಮೆನೆಜಸ್, ಕುಡ್ತಮಜಲ್, ಅರ್ಥರ್ ಮೆನೇಜಸ್ , ಅಂತೋನಿ ಮೆನೇಜಸ್ ಪಿಲಾರು, ವಿಲ್ಪ್ರೆಡ್ ಮಿನೇಜಸ್, ಕ್ಲಾರಾ ಕ್ವಾಡ್ರಸ್, ಸುನಿತಾ ಮೆನೇಜಸ್, ನಿಕಿಲ್ ಮಥಾಯಿಸ್, ಪ್ರತೀಕ್ಷಾ ಡಿಸೋಜಾ, ಲೀನಾ ಡಿಸೋಜಾ, ಡೆನೀಸಾ ಮಥಾಯಸ್ ವಿರುದ್ಧ ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೆ ಆರೋಪಿಗಳು ನವೆಂಬರ್ 3ರಂದು ಚರ್ಚಿನ ಎದುರುಗಡೆ ಉಡುಪಿಯ ಬಿಷಪ್ ಹಾಗೂ ಪಿರ್ಯಾದಿದಾರ ಡೆನಿಸ್ ಡೆಸಾರಿಗೆ ಬೆದರಿಕೆ ಹಾಕಿದ್ದಾರೆ. ಕೆಲಸ ಮಾಡದಂತೆ ಚರ್ಚಿನ ಕಚೇರಿಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡೆನ್ನೀಸ್ ಡೇಸಾ ಅವರು ನೀಡಿದ ದೂರಿನ ಆಧಾರದ ಮೇಲೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *