Wednesday, 23rd October 2019

ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ

ಉಡುಪಿ: ಮಣಿಪಾಲ ನಗರದ ಬಸ್ ನಿಲ್ದಾಣದ ರಸ್ತೆಯನ್ನು ರಸ್ತೆ ಅಂತ ಕರೆಯೋದು ಕಷ್ಟ. ಯಾಕಂದ್ರೆ ರಸ್ತೆ ಅನ್ನೋದಕ್ಕೆ ಅಲ್ಲಿ ರಸ್ತೆ ಇಲ್ಲ. ಬರೀ ಹೊಂಡ- ಗುಂಡಿಗಳಿಂದಲೇ ತುಂಬಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮತ್ತು ತಾರನಾಥ ಮೆಸ್ತಾ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹಲವು ಮನವಿಗಳಿಂದ ಬೇಸತ್ತು ನಿತ್ಯಾನಂದ ಒಳಕಾಡು ಅವರು ರಸ್ತೆಯಲ್ಲಿರುವ ಹೊಂಡಕ್ಕೆ ಇಳಿದು ಈಜಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ರಸ್ತೆಯಲ್ಲಿರುವ ಹೊಂಡದ ಆಳ ಎಷ್ಟಿದೆ ಅಂದ್ರೆ ನಿತ್ಯಾನಂದ ಒಳಕಾಡು ಮಲಗಿದವರು ಮುಳುಗುವಷ್ಟು ಹೊಂದಿದೆ ಎಂದು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ದೇಶದಲ್ಲೇ ಮಣಿಪಾಲಕ್ಕೆ ಒಂದು ವಿಶಿಷ್ಟ ಸ್ಥಾನಮಾನವಿದೆ. ಆದರೆ ಮಣಿಪಾಲದ ಈ ರಸ್ತೆ ಪಂಚಾಯತ್ ರಸ್ತೆಗಿಂತ ಕೀಳು ಮಟ್ಟಕ್ಕೆ ಇಳಿದಿದೆ. ವಾರದಲ್ಲಿಯೇ ಮೂರ್ನಾಲ್ಕು ಅಪಘಾತಗಳು ಆಗುತ್ತಿದೆ ಎಂದರು.

ಇದು ಕೆಎಂಸಿ ಆಸ್ಪತ್ರೆ ಇರುವ ಪ್ರದೇಶ. ಹೀಗಾಗಿ ಇಲ್ಲಿ ಅಂಬುಲೆನ್ಸ್ ಓಡಾಟ ಇಲ್ಲಿ ಜಾಸ್ತಿ. ಆದ್ರೆ ಹೊಂಡ ಗುಂಡಿಯ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ಅನಾರೋಗ್ಯ ಪೀಡಿತರಿಗೆ ಇದು ನರಕದ ರೀತಿಯಲ್ಲಿರುವ ರಸ್ತೆ ಆಗಿದೆ. ನಗರಸಭೆಗೆ ಕೇಳಿದ್ರೆ ಇದು ರಾಷ್ಟ್ರೀಯ ಹೆದ್ದಾರಿ ಅಂತ ಹೇಳುತ್ತಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿದ್ರೆ ಇದು ನಗರಸಭೆಯ ಜವಾಬ್ಧಾರಿ ಅಂತ ಹೇಳುತ್ತಾರೆ ಎಂದು ಹೇಳಿದರು.

ಈ ಹಿಂದೆ ನಿತ್ಯಾನಂದರ ಸಮಾಜ ಸೇವೆಯನ್ನು ಪಬ್ಲಿಕ್ ಟಿವಿ ಗುರುತಿಸಿ, ‘ಪಬ್ಲಿಕ್ ಹಿರೋ’ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರ ಮಾಡಿತ್ತು.

Leave a Reply

Your email address will not be published. Required fields are marked *