Connect with us

Districts

ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

Published

on

ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಗಾಳಕ್ಕೆ ಬಾಯಿ ಹಾಕುವ ಜಾತಿ ನಮ್ಮದಲ್ಲ ಅಂತ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಕಡಿವಾಣ ಹಾಕಿದ ಅವರು, ನನ್ನನ್ನು ಬಿಟ್ಟುಬಿಡಿ. ಅನಂತಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಒಂದು ವೇಳೆ ನಾನು ಅವರನ್ನು ಭೇಟಿಯಾಗದಿದ್ದರೂ ಅದೊಂದು ಸುದ್ದಿಯಾಗುತ್ತಿತ್ತು. ನಾವಿಬ್ಬರು ಕೋಣೆಯೊಳಗೆ ಕುಳಿತು ಮಾತನಾಡಲಿಲ್ಲ. ಇದಕ್ಕೆ ಅಪಾರ ಅರ್ಥ ಕಲ್ಪಿಸೋದು ಬೇಡ. ಕಾಂಗ್ರೆಸ್ ತೊರೆಯುವ ಪ್ರಸ್ತಾಪ ಇಲ್ಲ. ಈ ಕುರಿತು ಹಲವು ಬಾರಿ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಅಮಿತ್ ಷಾ ಮುಖವನ್ನೇ ನಾನು ನೋಡಿಲ್ಲ. ಯಾವ ಗಾಳವನ್ನು ಯಾರೂ ಹಾಕಿಲ್ಲ. ನಾನು ಕೂಡ ಗಾಳಕ್ಕೆ ಬಾಯಿ ಹಾಕುವ ಜಾತಿಯವನಲ್ಲ ಅಂತ ಸ್ಪಷ್ಟನೆ ನಿಡಿದ್ದಾರೆ.

ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಓಡಾಡುತ್ತಿದೆ. ಇದಕ್ಕೆ ಸಾಕ್ಷಿಯಂತೆ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತನಾಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಈ ಫೋಟೋ ರಾಜಕೀಯ ವಲಯದ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅನಂತ್ ಕುಮಾರ್ ಅವರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಉಳಿದಿದ್ದರು. ಆ ಸಂದರ್ಭದಲ್ಲಿಯೆ ಪ್ರಮೋದ್ ಅವರೂ ಪ್ರವಾಸಿ ಮಂದಿರಕ್ಕೆ ಹೋಗಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದರು.

ಈ ಸಂದರ್ಭ ಬಿಜೆಪಿ ಮುಖಂಡ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಮತ್ತಿತರರು ಇದ್ದರು. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ಮಹತ್ವ ಪಡೆದಿತ್ತು.