Connect with us

Districts

ಮುದ್ದು ಕಂದನಿಗೆ ‘ಕನ್ನಡ’ ಹೆಸರಿಟ್ಟ ಕುಂದಾಪುರದ ದಂಪತಿ

Published

on

ಉಡುಪಿ: ಕನ್ನಡ.. ಈ ಪದ ಕೇಳಿದ್ರೆ ನಮಗೆ ಮೈ ಪುಳಕವಾಗುತ್ತೆ. ಇಲ್ಲೋರ್ವ ಕುಂದಾಪುರ ಕನ್ನಡವನ್ನು ಅತಿಯಾಗಿ ಪ್ರೀತಿಸುವ ಬೆಂಗಳೂರು ಉದ್ಯಮಿ ತನ್ನ ಮಗಳಿಗೆ ಕನ್ನಡವೆಂದು ಹೆಸರಿಟ್ಟಿದ್ದಾರೆ. ಉಡುಪಿ ಮೂಲದ ಈ ಕುಟುಂಬದ ಕನ್ನಡ ಪ್ರೇಮ ಕರುನಾಡಿಗೆ ಮಾದರಿಯಾಗಿದೆ.

ಹೌದು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಅಪ್ಪಟ ಕನ್ನಡಾಭಿಮಾನಿ. . ಸದ್ದಿಲ್ಲದೇ ಕನ್ನಡವನ್ನು ಉಳಿಸೋ ಕಾರ್ಯವನ್ನು ಮಾಡುತ್ತಿರೋ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿ ಇದೀಗ ತಮ್ಮ ಹೆಣ್ಣು ಮಗುವಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ.

ಕಳೆದ 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲ ಕಂಡು ಕೊಂಡಿರುವ ಪ್ರತಾಪ್ ಶೆಟ್ಟಿ ಅವರು ಬಹಿರಂಗವಾಗಿ ಎಲ್ಲಿಯೂ ಕನ್ನಡಾಭಿ ಮಾನವನ್ನು ಹೇಳಿಕೊಳ್ಳುವುದಿಲ್ಲ. ಆದರೆ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಮಗುವಿನ ಹೆಸರನ್ನು ಇಡೋದಕ್ಕೆ ಗೂಗಲ್ ನಲ್ಲಿ ಸರ್ಚ್ ಮಾಡೋರೇ ಹೆಚ್ಚು. ಅದ್ರಲ್ಲೂ ಅರ್ಥವಿಲ್ಲದ ಹೆಸರನ್ನು ಇಡುವವರು ಇನ್ನೊಂದಿಷ್ಟು ಜನ.

ಪ್ರತಾಪ್ ಶೆಟ್ಟಿ ಅವರು ಮಗುವಿಗೆ ಹೆಸರಿಡಬೇಕು ಅಂತ ಅಂದುಕೊಂಡಾಗ ಥಟ್ಟನೆ ಹೊಳೆದಿದ್ದು ತಾಯಿ ಭುವನೇಶ್ವರಿ. ಕನ್ನಡದ ಅಭಿಮಾನಿಯಾಗಿರುವ ಪ್ರತಾಪ್ ಶೆಟ್ಟಿ ಅವರು ಮಗಳಿಗೆ ಕನ್ನಡ ಎಂದು ಹಸರಿಡೋದಕ್ಕೆ ಪ್ಲಾನ್ ಮಾಡಿದಾಗ ಪತ್ನಿ ಪ್ರತಿಮಾ ಶೆಟ್ಟಿ ಅವರು ಕೂಡ ಸಾಕಷ್ಟು ಖುಷಿಯಾಗೊಂಡಿದ್ದಾರೆ.

ಮರೆಯಾಗುತ್ತಿರುವ ಕನ್ನಡಾಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿಗೆ ಕನ್ನಡಾಂಬೆಯ ಹೆಸರನ್ನಿಟ್ಟಿದ್ದೇವೆ. ಮಾತ್ರವಲ್ಲ ಕನ್ನಡಳಿಗೆ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ತೋರಿಸುತ್ತೇವೆ ಎಂದು ತಂದೆ ಪ್ರತಾಪ್ ಶೆಟ್ಟಿ ಹೇಳುತ್ತಾರೆ.

ಇನ್ನೊಂದು ವಿಶೇಷವೆಂದ್ರೆ ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಕನ್ನಡ ಶೆಟ್ಟಿ ಹುಟ್ಟಿರುವುದು ಕೂಡ ನವೆಂಬರ್ ತಿಂಗಳಿನಲ್ಲಿಯೇ. ನವೆಂಬರ್ 27ರಂದು ಕನ್ನಡ ಹುಟ್ಟುಹಬವನ್ನು ಆಚರಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ರಂಗದೋರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019ರ ನವೆಂಬರ್ 27ರಂದು ಜನಿಸಿದ ಕನ್ನಡ ಶೆಟ್ಟಿಗೆ ಮುಂದಿನ ತಿಂಗಳು ಒಂದು ವರ್ಷ ತುಂಬುತ್ತಿದೆ. ಮಗಳಿಗೆ ಕನ್ನಡವೆಂದು ಹೆಸರಿಟ್ಟಿರುವುದು ಮಾತ್ರವಲ್ಲ ಅದೇ ಹೆಸರಿನಲ್ಲಿಯೇ ಜನನ ಪ್ರಮಾಣ ಪತ್ರವನ್ನೂ ನೋಂದಾಯಿಸಿ ಕೊಂಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನನ ಪ್ರಮಾಣ ಪತ್ರವನ್ನು ನೋಂದಣಿ ಮಾಡಿದೆ. ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿರುವ ಪ್ರತಾಪ್ ಶೆಟ್ಟಿಗೆ ಧನ್ಯವಾದ ಹೇಳಲೇಬೇಕು. ಮಗುವಿನ ಮುಂದಿನ ಭವಿಷ್ಯಕ್ಕಾಗಿ ಹಾರೈಸಬೇಕು.

Click to comment

Leave a Reply

Your email address will not be published. Required fields are marked *