Connect with us

Districts

ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ- ಕೆಲ ಅರ್ಚಕರು, ಭಕ್ತರಿಗೆ ಅಸಮಾಧಾನ

Published

on

ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ನವಮಿಯಂದು ನಡೆದ ಮಹಾರಥೋತ್ಸವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಪುಷ್ಪಾಲಂಕೃತ ಮರದ ರಥದ ಬದಲು ಚಿನ್ನದ ರಥವನ್ನು ಉತ್ಸವಕ್ಕೆ ಬಳಸಿದ್ದು ಇದಕ್ಕೆ ಕಾರಣ.

ಕೊಲ್ಲೂರಲ್ಲಿ ನವಮಿಗೆ ಪ್ರತಿವರ್ಷ ಉತ್ಸವಮೂರ್ತಿಯನ್ನು ಮರದ ಪುಷ್ಪಾಲಂಕೃತ ರಥದಲ್ಲಿಟ್ಟು ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಈ ಬಾರಿ ಚಿನ್ನದ ರಥದಲ್ಲಿಟ್ಟು ಮೂಕಾಂಬಿಕಾ ದೇವಿಯ ರಥೋತ್ಸವ ಮಾಡಲಾಗಿದೆ. ಇದು ಕೆಲ ಅರ್ಚಕರಿಗೆ ಅಸಮಾಧಾನ ತಂದಿದೆ. ಅಲ್ಲದೆ ಕೆಲ ಭಕ್ತರೂ ಇದಕ್ಕೆ ದನಿಗೂಡಿಸಿದ್ದಾರೆ.

ಭಾರತದ ಶಕ್ತಿಪೀಠಗಳಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ರಾಜ್ಯದ ಮೂಲೆ ಮೂಲೆಗಳಿಂದ ಹೊರರಾಜ್ಯಗಳಿಂದ ಇಲ್ಲಿಗೆ ಭಕ್ತರು ಬಂದು ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತು ಕೃತಾರ್ಥರಾದ ಲಕ್ಷಾಂತರ ಜನ ಇದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂರ್ತಿ ತಿಂಗಳು ಅನೇಕ ಕಾರ್ಯಕ್ರಮಗಳು ನಡೆಯುತ್ತದೆ.

ನವಮಿಯಂದು ದೇಗುಲದ ಪ್ರಾಂಗಣದಲ್ಲಿ ಕೊಲ್ಲೂರು ಮೂಕಾಂಬಿಕೆಯ ಉತ್ಸವ ನಡೆಯುತ್ತದೆ. ಕಳೆದ ಇಷ್ಟೂ ವರ್ಷಗಳಲ್ಲಿ ದೇವಿಯನ್ನು ಹೂವಿನಿಂದ ಅಲಂಕರಿಸಿದ ಮರದ ರಥದಲ್ಲಿಟ್ಟು ಉತ್ಸವ ಮಾಡಲಾಗುತ್ತಿತ್ತು. ಈ ಬಾರಿ ಕೊರೊನಾ ಸಾಂಕ್ರಾಮಿಕದ ಕಾರಣ ದೇಗುಲದ ಅರ್ಚಕರು, ಸಿಬ್ಬಂದಿ ಆಸು-ಪಾಸಿನವರು ಮಾತ್ರ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಮರದ ರಥದ ಬದಲು ಚಿನ್ನದ ರಥದಲ್ಲಿ ದೇವಿಯನ್ನು ಉತ್ಸವ ಮಾಡಲಾಯಿತು. ಕೆಲ ಭಕ್ತರು ಅರ್ಚಕರಿಗೆ ಇದು ಸರಿ ಕಂಡಿಲ್ಲ.

ಇದು ಸಂಪ್ರದಾಯಕ್ಕೆ ವಿರುದ್ಧ, ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ತಗಾದೆ ತೆಗೆದಿದ್ದಾರೆ. ದೇಗುಲದ ಪ್ರಾಂಗಣದಲ್ಲಿ, ಆಡಳಿತಾಧಿಕಾರಿಯ ಕಚೇರಿಯ ಜಗಲಿಯಲ್ಲಿ ಕುಳಿತು ಗೊಣಗಾಟ ಶುರುಮಾಡಿದ್ದಾರೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿಯಲಾಯ್ತು ಎಂದು ಮೂಗು ಮುರಿದಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹತ್ತು ವರ್ಷದ ಹಿಂದೆ ಬಿ.ಎಂ ಸುಕುಮಾರ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ಸಮರ್ಪಿಸಲಾಗಿತ್ತು. ಬೈಂದೂರು ಕ್ಷೇತ್ರಕ್ಕೆ ಈಗ ಸುಕುಮಾರ್ ಶೆಟ್ಟಿ ಶಾಸಕರು. ಹೀಗಾಗಿ ಅಂದು ಸಮರ್ಪಿಸಲಾದ ಚಿನ್ನದ ರಥವನ್ನು ನವರಾತ್ರಿ ಉತ್ಸವಕ್ಕೆ ಬಳಸಿ ಎಂದು ಹೇಳಿದ್ದಾರಂತೆ. ಹೀಗಾಗಿ ಸಿದ್ಧವಾದ ಮರದ ರಥ ಪಕ್ಕಕ್ಕಿಟ್ಟು ಚಿನ್ನದ ರಥದಲ್ಲಿ ದೇವಿಯ ಮೆರವಣಿಗೆ ಆಗಿದೆ. ಈ ಬೆಳವಣಿಗೆ ಸದ್ಯ ಕೊಲ್ಲೂರಿನಲ್ಲಿ ಚರ್ಚೆಯ ವಿಷಯ.

Click to comment

Leave a Reply

Your email address will not be published. Required fields are marked *