Connect with us

Crime

ಗೋಣಿ ಚೀಲಗಳಲ್ಲಿ ಮಂಗಗಳ ಮೃತದೇಹ ಪತ್ತೆ- ವಿಷವಿಟ್ಟಿರುವ ಶಂಕೆ

Published

on

ಉಡುಪಿ: ಎರಡು ಗೋಣಿಚೀಲಗಳಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಡಿನಲ್ಲಿ ತುಂಬಿರುವ ಎರಡು ಸೆಣಬಿನ ಗೋಣಿ ಎಸೆದು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ತೆರೆದು ನೋಡಿದಾಗ ಹಲವಾರು ಮಂಗಗಳ ಮೃತದೇಹಗಳು ಕಾಣಿಸಿಕೊಂಡಿದೆ.

ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತೋಟಕ್ಕೆ ಬಂದು ಉಪಟಳ ನೀಡುತ್ತಿದ್ದ ಮಂಗಗಳಿಗೆ ವಿಷವಿಟ್ಟು ಕೊಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆಗುಂಬೆ ಘಾಟಿ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳು ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ತೋಟಗಳಿಗೆ ಮಂಗಗಳು ಬರುವುದು ಸಾಮಾನ್ಯ. ರೈತರಿಗೆ ಉಪಟಳ ಜಾಸ್ತಿಯಾದಾಗ ವಿಷವಿಟ್ಟು ಮಂಗಗಳನ್ನು ಕೊಂದಿರುವ ಸಾಧ್ಯತೆ ಇದೆ.

ಕಳೆದ ವರ್ಷ ಕೂಡ ನೂರಾರು ಸಂಖ್ಯೆಗಳಲ್ಲಿ ಕೋತಿಗಳ ಮಾರಣಹೋಮ ನಡೆದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗಿ ನಾಡ್ಪಾಲು ಸಮೀಪ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಕಪ್ರಾಣಿಗಳ ಮೇಲೆ ಮೃಗೀಯ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಸ್ಥಳೀಯ ಯುವತಿ ಚೇತನಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ಆಗುಂಬೆಗೆ ಹೋಗಿ ವಾಪಸ್ಸಾಗುವಾಗ ಸ್ವಲ್ಪ ರೆಸ್ಟ್ ಮಾಡುವ ಉದ್ದೇಶದಿಂದ ಕಾರು ನಿಲ್ಲಿಸಿದೆವು. ರಸ್ತೆ ಪಕ್ಕದಲ್ಲೇ ಮಂಗಗಳ ಮೃತದೇಹಗಳನ್ನು ಗೋಣಿಚೀಲದಲ್ಲಿ ಕಂಡು ಮನಸ್ಸಿಗೆ ಬಹಳ ನೋವಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳ ಮೂಲಕ ಯಾರು ಈ ಕೃತ್ಯವೆಸಗಿದ್ದಾರೆ ಎನ್ನುವ ಬಗ್ಗೆ ಮಾಹಿತಿಯನ್ನು ಕಲೆಹಾಕಬೇಕು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು. ಭೂಮಿಯ ಮೇಲೆ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂದರು.

Click to comment

Leave a Reply

Your email address will not be published. Required fields are marked *