Crime
ರಸ್ತೆ ಮಧ್ಯೆ ಹ್ಯಾಪಿ ನ್ಯೂ ಇಯರ್ ಬರೆಯುತ್ತಿರುವಾಗ ಕಾರು ಡಿಕ್ಕಿ- ಇಬ್ಬರು ದುರ್ಮರಣ

ಉಡುಪಿ: ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಇಬ್ಬರು ಯುವಕರು ಬಲಿಯಾದ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿದೆ.
ಬಾಗಲಕೋಟೆ ನಿವಾಸಿಗಳಾಗಿರುವ ಶರಣ್ ಹಾಗೂ ಸಿದ್ದು ಮೃತರು. ಕಾರ್ಕಳದಲ್ಲಿ ಜೆಸಿಬಿ ಹಾಗೂ ಟಿಪ್ಪರ್ ಚಾಲಕರಾಗಿರುವ ಇವರು, ಹೊಸ ವರ್ಷದ ಮೂಡ್ ನಲ್ಲಿ ಗುರುವಾರ ತಡರಾತ್ರಿ ಹ್ಯಾಪಿ ನ್ಯೂ ಇಯರ್ ಅಂತ ರಸ್ತೆ ಮಧ್ಯೆ ಬರೆದು ಎಲ್ಲರನ್ನೂ ಹೊಸ ವರ್ಷಕ್ಕೆ ಸ್ವಾಗತಿಸಬೇಕು ಅಂತ ಅಂದುಕೊಂಡಿದ್ದರು.
ರಸ್ತೆ ಮಧ್ಯೆ ಬರೆಯುತ್ತಿರುವಾಗಲೇ ವೇಗದಿಂದ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶರಣ್ ಸ್ಥಳದಲ್ಲೇ ಮೃತಪಟ್ಟರೆ, ಸಿದ್ದು ಆಸ್ಪತ್ರೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ರಸ್ತೆ ಮಧ್ಯೆ ಈ ಯುವಕರು ಒದ್ದಾಡುತ್ತಿರುವುದನ್ನ ಕಂಡು ಚಾಲಕ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ.
