Connect with us

Districts

ಕೋಟಿ ಬಾಳುವ ಜಮೀನು ಬರೆಸಿಕೊಂಡು ಮೊಮ್ಮಗಳು ಎಸ್ಕೇಪ್

Published

on

– ಅತಿಯಾಗಿ ಪ್ರೀತಿಸಿದ್ದ ಅಜ್ಜಿಗೆ ದ್ರೋಹ
– 4 ಕುಟುಂಬ ಬೀದಿ ಪಾಲು

ಉಡುಪಿ: ಕಥೆ ಹೇಳುತ್ತಾ ತುತ್ತು ಕೊಟ್ಟು ಬೆಳೆಸಿದ ಅಜ್ಜಿಗೆ ಮೊಮ್ಮಗಳು ಬೆನ್ನಿಗೆ ಚೂರಿ ಹಾಕಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅತಿಯಾಗಿ ಪ್ರೀತಿಸಿದ ಮೊಮ್ಮಗಳೇ ಅಜ್ಜಿಗೆ ನಂಬಿಕೆ ದ್ರೋಹ ಮಾಡಿದ್ದಾಳೆ. ಕೋಟಿ ಬಾಳುವ ಜಮೀನು ಮನೆಯನ್ನು ಸರ್ಕಾರಿ ಅಧಿಕಾರಿಗಳ ಸಹಾಯ ಪಡೆದು ಬರೆಸಿಕೊಂಡಿದ್ದು, ಇಡೀ ಕುಡುಂಬದ ಹಿರಿಯ ನಾಗರಿಕರು ಬೀದಿಗೆ ಬಂದಿದ್ದಾರೆ.

ಜಿಲ್ಲೆಯ ಕಾಪು ತಾಲೂಕಿನ ಸಾಂತೂರಿನಲ್ಲಿ ಮೊಮ್ಮಗಳು ಮಾಡಿರುವ ನಂಬಿಕೆ ದ್ರೋಹದಿಂದ ಅಜ್ಜಿ ಸೆಲೆಸ್ಟಿನ್ (84) ಹಾಸಿಗೆ ಹಿಡಿದಿದ್ದಾರೆ. ಎರಡು ಕೋಟಿ ಜಮೀನು ಬರೆಸಿಕೊಂಡು ರೋಶ್ನೀ ಎಸ್ಕೇಪ್ ಆಗಿದ್ದಾಳೆ. ಸದ್ಯ ಅಜ್ಜಿಯ ನಾಲ್ಕು ಮಕ್ಕಳ ಕುಟುಂಬ ನೆಲೆ ಕಳೆದುಕೊಂಡಿದೆ.

ಕೃಷಿ ಕೂಲಿ ಮಾಡಿ ಗಳಿಸಿದ ಹಣದಿಂದಲೇ ಸೆಲೆಸ್ಟಿನ್ 1967 ರಲ್ಲಿ ಎರಡು ಎಕರೆ ಭೂಮಿ ಖರೀದಿಸ್ತಾರೆ. ಮನೆ ಕಟ್ಟಿ, ಬಾವಿ ತೋಡಿ ಬೇಸಾಯ ಮಾಡಿ, ತೋಟ ನಿರ್ಮಿಸುತ್ತಾರೆ. ಕೃಷಿ ಆದಾಯದಿಂದಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕುತ್ತಾರೆ. ಪತಿ ಗ್ರೆಗರಿ ಸತ್ತಾಗ ಮುಂಬೈ ನಲ್ಲಿದ್ದ ಮಗ ರೋನಾಲ್ಡ್ ಊರಿಗೆ ವಾಪಸ್ಸಾಗಿ ತಾಯಿಯ ಲಾಲನೆ ಪಾಲನೆ ಮಾಡುತ್ತಾನೆ. ಈ ರೋನಾಲ್ಡ್ ಮಗಳು ರೋಶ್ನೀ ಈಗ ಮೋಸ ಮಾಡಿದ್ದಾಳೆ. ಅಜ್ಜಿಯ ಆಸ್ತಿಯನ್ನು ತಂದೆಗೆ ಗೊತ್ತಾಗದಂತೆ ಅಜ್ಜಿಯ ಕೈಯಲ್ಲಿ ಬರೆಸಿಕೊಂಡಿದ್ದಾಳೆ ಎಂದು ಸೆಲೆಸ್ಟಿನ್ ಪುತ್ರ ರೊನಾಲ್ಡ್ ಹೇಳಿದ್ದಾರೆ.

ಅಜ್ಜಿ ಮತ್ತು ತಂದೆಯನ್ನು ಮೂಲ್ಕಿಯ ಸಬ್ ರಿಜಿಸ್ಟಾರ್ ಕಚೇರಿಗೆ ಕರೆದೊಯ್ದಿದ್ದಾಳೆ. ಅನಕ್ಷರಸ್ಥ ಅಜ್ಜಿಯ ಹೆಬ್ಬೆಟ್ಟು- ಅಪ್ಪನ ಸಹಿ ಹಾಕಿಸಿಕೊಂಡಿದ್ದಾಳೆ. ಮೂರು ತಿಂಗಳ ನಂತರ ತಂದೆಯನ್ನು ಮಾತ್ರ ಅದೇ ಕಚೇರಿಗೆ ಕರೆದೊಯ್ದು ಮತ್ತೆ ಸಹಿ ಪಡೆದಿದ್ದಾಳೆ. ಈ ಮೂಲಕ ಸೆಲಿಸ್ಟಿನ್ ಕೋಟಿ ಮೌಲ್ಯದ ಆಸ್ತಿ ಮೊಮ್ಮಗಳ ಪಾಲಾಗಿದೆ. ಕೇಂದ್ರ ಸರ್ಕಾರದ ಕೃಷಿಸಾಲ ಅಂತ ಹೇಳಿ ಸಹಿ ಮಾಡಿಸಿಕೊಂಡಿದ್ದಾಳೆ. ಈ ಬೆಳವಣಿಗೆ ಅಜ್ಜಿಯ ನಾಲ್ಕು ಮಕ್ಕಳಿಗೆ ಶಾಕ್ ಕೊಟ್ಟಿದೆ. ಈ ನಡುವೆ ಸೆಲೆಸ್ಟಿನ್ ತನ್ನ ನಾಲ್ವರು ಮಕ್ಕಳ ಹೆಸರಿಗೆ ಜಮೀನನ್ನು ವಿಲ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ಸಬ್ ರಿಜಿಸ್ಟಾರ್ ಕಚೇರಿ, ಭೂ ಕಂದಾಯ ಅಧಿಕಾರಿಗಳ ಶಾಮೀಲು ಕಾಣಿಸುತ್ತಿದೆ ಎಂದು ಮಾನವಹಕ್ಕು ಹೋರಾಟಗಾರ ಹೇಳಿದ್ದಾರೆ.

ಇಲ್ಲಿ ಹಿರಿಯ ನಾಗರಿಕರ ಹಕ್ಕಿನ ಉಲ್ಲಂಘನೆ ಆಗಿದೆ. ವಾರದ ಹಿಂದೆ ಕೃಷಿ ಸಮೀಕ್ಷೆ ನಡೆದಾಗ ಜಮೀನು ವರ್ಗಾವಣೆ ವಿಚಾರ ಗೊತ್ತಾಗಿದೆ. ಅಧಿಕಾರಿಗಳು ಹಣದಾಸೆಗೆ ಬಿದ್ದು, ಬೇಜಾವಬ್ದಾರಿ ಮೆರೆದಿದ್ದಾರೆ. ಸುಪ್ರೀಂ ಕೋರ್ಟ್ ಹಿರಿಯ ನಾಗರಿಕರ ಹಕ್ಕುಗಳ ವಿಚಾರದಲ್ಲಿ ಕಠಿಣ ಕಾನೂನು ತಂದರೂ, ಅಧಿಕಾರಿಗಳು ಅದನ್ನು ಪಾಲಿಸದಿರುವುದರಿಂದ ಇಂತಹ ಲಕ್ಷಾಂತರ ಹಿರಿಯ ನಾಗರೀಕರಿಗೆ ಅನ್ಯಾಯ ಆಗುತ್ತಿದೆ. ನಮ್ಮ ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಪ್ರಕರಣ ಕೈಗೆತ್ತಿಕೊಂಡಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಭರವಸೆ ಕೊಟ್ಟಿದ್ದಾರೆ.

ತಾನು ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ಮೊಮ್ಮಗಳೇ ಲಪಟಾಯಿಸಿದ್ದಾಳೆ. ತಾನೇ ಎತ್ತಿ ಮುದ್ದಾಡಿದ ಮೊಮ್ಮಗಳು ಎಂದು ತಿಳಿಯುತ್ತಲೇ ಹಿರಿ ಜೀವ ಪಾಶ್ರ್ವ ವಾಯುಗೊಳಗಾಗಿದ್ದಾರೆ. ಈ ಹಿರಿಯ ಜೀವಕ್ಕೆ ಪೂರ್ಣ ಪ್ರಮಾಣದ ಕಾನೂನು ನೆರವು ನೀಡಲು ಪ್ರತಿಷ್ಟಾನ ಪಣ ತೊಟ್ಟಿದೆ. ಈ ಹಿಂದೆ ಕೂಡಾ ಪ್ರತಿಷ್ಠಾನ ಹಿರಿಯ ನಾಗರೀಕರಿಗೆ ಬೆಂಬಲ ನೀಡುತ್ತದೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಪಬ್ಲಿಕ್ ಟಿವಿಜೊತೆ ಮಾತಮಾಡುತ್ತಾ ಹೇಳಿದರು.

Click to comment

Leave a Reply

Your email address will not be published. Required fields are marked *