ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

ಉಡುಪಿ: ದೇವಾಲಯಗಳ ನಗರಿ ಉಡುಪಿಗೆ ಕೇಸರಿ ಅಭಿಷೇಕವಾಗಿದೆ. ನಗರದಲ್ಲಿ ನಡೆಯಲಿರುವ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ದಿನಗಳ ಕಾಲ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯಲಿರುವ ಧರ್ಮಸಂಸದ್ ಶುಕ್ರವಾರದಿಂದ ಆರಂಭವಾಗಲಿದೆ. ಹೀಗಾಗಿ ಧರ್ಮಸಂಸದ್ ಎಂದರೇನು? ಯಾಕೆ ನಡೆಯುತ್ತದೆ? ಯಾರೆಲ್ಲ ಭಾಗವಹಿಸುತ್ತಾರೆ? ಯಾವೆಲ್ಲ ವಿಚಾರದ ಬಗ್ಗೆ ಚರ್ಚೆ ನಡೆಯುತ್ತದೆ ಎನ್ನುವುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಏನಿದು ಧರ್ಮ ಸಂಸದ್?
ರಾಷ್ಟ್ರಮಟ್ಟದ ರಾಜಕೀಯ ವಿಚಾರಗಳು ಹೇಗೆ ಸಂಸತ್ತಿನಲ್ಲಿ ಚರ್ಚೆಯಾಗುತ್ತದೋ ಅದೇ ರೀತಿಯಾಗಿ ಹಿಂದೂ ಧರ್ಮದ ವಿಚಾರಗಳನ್ನು ದೇಶದ ಸಾಧು, ಸಂತರು, ಧಾರ್ಮಿಕ ನಾಯಕರು, ಚರ್ಚೆ ಮಾಡಲೆಂದು ಸ್ಥಾಪಿತವಾಗಿರುವ ವೇದಿಕೆಯೇ ಧರ್ಮ ಸಂಸದ್. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಇತರ ಹಿಂದೂ ಸಂಘಟಗಳ ಸಹಕಾರದೊಂದಿಗೆ ಧರ್ಮಸಂಸದ್ ನಡೆಯುತ್ತದೆ. ಶೈವ, ವೈಷ್ಣವ, ಜೈನ, ಬೌದ್ಧ, ಸಿಖ್ ಧರ್ಮದ ನಾಯಕರು ಈ ಸಂಸದ್ ನಲ್ಲಿ ಭಾಗವಹಿಸುತ್ತಾರೆ.

ಏನು ಚರ್ಚೆ ಆಗುತ್ತೆ?
ಹಿಂದೂ ಧರ್ಮದೊಳಗಿನ ವಿವಿಧ ಸಮಸ್ಯೆ, ಆಗುಹೋಗುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ. ಈ ಸಂಸದ್ ಪ್ರತಿವರ್ಷ ನಡೆಯುವುದಿಲ್ಲ. ಯಾವಾಗ ಹಿಂದೂ ಧರ್ಮದ ಕೆಲ ವಿಚಾರದಲ್ಲಿ ಗೊಂದಲ, ಸಮಸ್ಯೆ ಕಂಡುಬಂದ ಸಮಯದಲ್ಲಿ ಅದನ್ನು ಪರಿಹಾರ ಮಾಡುವ ಉದ್ದೇಶದಿಂದ ಚರ್ಚೆ ನಡೆಸಲಾಗುತ್ತದೆ. ಚರ್ಚೆಯ ಬಳಿಕ ಅಂತಿಮವಾಗಿ ಒಂದು ನಿರ್ಣಯಕ್ಕೆ ಬರಲಾಗುತ್ತದೆ. ಬಂದಿರುವ ನಿರ್ಣಯವನ್ನು ಜನರ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ.

ಮೊದಲು ಆರಂಭವಾಗಿದ್ದು ಎಲ್ಲಿ?
ವಿಶ್ವ ಹಿಂದೂ ಪರಿಷತ್ತು 1964ರಲ್ಲಿ ಸ್ಥಾಪನೆಯಾಗಿದ್ದರೆ, 1984ರಲ್ಲಿ ಧರ್ಮ ಸಂಸದ್ ಸ್ಥಾಪನೆಯಾಗಿದೆ. ಮೊದಲ ಸಂಸದ್ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿತ್ತು. ಮೊದಲ ಸಂಸದ್‍ನಲ್ಲಿ ಹಿಂದೂ ಧರ್ಮದ ಒಳಗಡೆ ಇರುವ ಮೌಢ್ಯಾಚರಣೆ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಹಿಂದೆ ಎಲ್ಲೆಲ್ಲಿ ನಡೆದಿದೆ?
ಉಡುಪಿ(1985), ಪ್ರಯಾಗ(1989), ನವದೆಹಲಿಯ ತಾಲ್‍ಕಟೋರಾ ಸ್ಟೇಡಿಯಂ(1991), ದೆಹಲಿಯ ಕೇಶವಪುರ(1992), ದೆಹಲಿಯ ಪಂವಟ್ಟಿ ಚೌಕ್(1996), ಗುಜರಾತ್(1999), ಪ್ರಯಾಗ(2001), ರಾಮಲೀಲಾ ಮೈದಾನ(2003).

ಈ ಬಾರಿ ಏನು ಚರ್ಚೆ ಆಗುತ್ತೆ?
ಗೋ ರಕ್ಷಣೆ, ಮತಾಂತರ, ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಎರಡನೇ ಧರ್ಮಸಂಸದ್ ವಿಶೇಷತೆ ಏನು?
ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ 3ನೇ ಪರ್ಯಾಯ ಸಂದರ್ಭ 1985ರಲ್ಲಿ ಉಡುಪಿಯಲ್ಲಿ 2ನೇ ಧರ್ಮ ಸಂಸದ್ ನಡೆದಿತ್ತು. ಈ ವೇಳೆ ಅಯೋಧ್ಯೆಯ ರಾಮ ಲಲ್ಲಾ ಗುಡಿಯ ಬಾಗಿಲು ತೆರೆಯುವಂತೆ ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಒಂದು ವೇಳೆ ಬೀಗ ತೆರೆಯದೇ ಇದ್ದರೆ ರಾಮ ಭಕ್ತರೇ ಬೀಗವನ್ನು ಮುರಿಯಲಿದ್ದಾರೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಎಚ್ಚರಿಕೆಗೆ ಬೆದರಿದ ಉತ್ತರಪ್ರದೇಶದ ಸರ್ಕಾರ ತಾನಾಗಿಯೇ ಬೀಗವನ್ನು ತೆರದಿತ್ತು. ಈ ಮೂಲಕ ಉಡುಪಿಯ ಧರ್ಮಸಂಸದ್‍ ನಿರ್ಣಯಕ್ಕೆ ಜಯ ಸಿಕ್ಕಿತ್ತು.

 

ಈ ಬಾರಿಯ ಕಾರ್ಯಕ್ರಮಗಳು ಏನು?
12ನೇ ಧರ್ಮಸಂಸತ್ತಿನಲ್ಲಿ ನಡೆಯುವ ನಾಲ್ಕು ಗೋಷ್ಟಿಗಳಲ್ಲಿ 2000 ಸಾಧು/ಸಂತರು, 3000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 1.14 ಲಕ್ಷ ಚದರಡಿಯಲ್ಲಿ ವೇದಿಕೆ, ಪೆಂಡಾಲ್, ಶ್ರೀಕೃಷ್ಣ ಪ್ರಸಾದ ಭವನ, ಪಾಕ ಶಾಲೆ ನಿರ್ಮಾಣವಾಗಿದೆ. ಮಂದಿ ಮೊದಲ ದಿನ ಕೃಷ್ಣಮಠದಿಂದ ಸಂತರ ಮೆರವಣಿಗೆ ನಡೆಯುತ್ತದೆ. ರಾಯಲ್ ಗಾರ್ಡನ್‍ನ ನಾರಾಯಣ ಗುರು ಸಭಾ ಭವನಕ್ಕೆ ಎಲ್ಲರೂ ಬಂದು ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಗ್ಗೆ ಮತ್ತು ಮಧ್ಯಾಹ್ನ ರಾಮಮಂದಿರ ಮತ್ತು ಗೋಹತ್ಯಾ ನಿಷೇಧದ ಬಗ್ಗೆ ಚರ್ಚೆಗಳು ನಡೆಯುತ್ತದೆ. ಎರಡು ದಿನಗಳ ಕಾಲ ಗೋಹತ್ಯೆ, ಮತಾಂತರ, ಅಸ್ಪಸ್ಪೃಷ್ಯತೆ, ಭಾರತೀಯ ಸಂಸ್ಕೃತಿ ಉಳಿವು- ಜಾತಿ ಸಾಮರಸ್ಯ, ಸಮಾಜದ ಬಗ್ಗೆ ಸಂತರ ಕಳಕಳಿ ಮತ್ತು ಜವಾಬ್ದಾರಿಯ ಬಗ್ಗೆ ಚರ್ಚೆ ನಡೆಯಲಿದೆ.

ಯೋಗಿ ಭಾಷಣ:
ನ.26ರಂದು ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಸಾಮಾಜಿಕ ಸದ್ಭಾವನಾ ಪ್ರಮುಖರ ಸಭೆ ಬಳಿಕ ಧರ್ಮ ಸಂಸದ್‍ನಿಂದ ಅಂತಿಮ ನಿರ್ಣಯ ಹೊರಬೀಳಲಿದೆ. ಮಧ್ಯಾಹ್ನ 2 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಶೋಭಾಯಾತ್ರೆ ನಡೆಯಲಿದೆ. ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಂಜೆ 4 ಗಂಟೆಗೆ `ವಿರಾಟ್ ಹಿಂದೂ ಸಮಾಜೋತ್ಸವ’ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಉಪಸ್ಥಿತಿಯಲ್ಲಿ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಬಿಜೆಪಿ ಪ್ರತಿನಿಧಿಯಾಗಿ ಈ ಸಂಸದ್‍ನಲ್ಲಿ ಭಾಗವಹಿಸುತ್ತಿಲ್ಲ. ಬದಲಾಗಿ ಗೋರಖ್‍ಪುರದ ಪೀಠಾಧಿಪತಿಯಾಗಿ ಭಾಗವಹಿಸುತ್ತಾರೆ.

ಯಾರೆಲ್ಲ ಭಾಗವಹಿಸಲಿದ್ದಾರೆ?
ಕೇಂದ್ರ ಸಚಿವೆ ಉಮಾಭಾರತಿ, ಶ್ರೀ ರವಿಶಂಕರ್ ಗುರೂಜಿ, ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸಾಧ್ವಿ ಋತಂಬರಾ, ಸಾಧ್ವಿ ಸರಸ್ವತಿಜೀ, ಸುತ್ತೂರು, ಆದಿಚುಂಚನಗಿರಿ, ಸಿದ್ಧಗಂಗಾ ಕಿರಿಯ ಶ್ರೀ, ಕಂಚಿಪೀಠದ ಯತಿಗಳು ಉಡುಪಿಗೆ ಆಗಮಿಸಲಿದ್ದಾರೆ.

ಡಿಸೆಂಬರ್ 6ಕ್ಕೆ ಮುಹೂರ್ತ?
ಡಿಸೆಂಬರ್ ಆರು ಅನ್ನೋ ಮ್ಯಾಜಿಕ್ ನಂಬರ್ ದೇಶಾದ್ಯಂತ ಸಂಚಲನ ಮೂಡಿಸಿದೆ. ಡಿಸೆಂಬರ್ ಆರಕ್ಕೆ ಬಾಬ್ರಿ ಮಸೀದಿ ದ್ವಂಸವಾಗಿ 25 ವರ್ಷ ತುಂಬಲಿದೆ. ಅದೇ ದಿನಾಂಕದಂದು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ ಎಂಬ ಮಾಹಿತಿಯಿದೆ. ಉಡುಪಿಯ ಧರ್ಮಸಂಸತ್ತೇ ರಾಮಮಂದಿರಕ್ಕೆ ಗಟ್ಟಿ ಧನಿ. ಈ ಎಲ್ಲಾ ಲೆಕ್ಕಾಚಾರಗಳು ಧರ್ಮಸಂಸದ್ ಚಾವಡಿಯಲ್ಲಿ ನಡೆಯುತ್ತಿದೆ. ಹೀಗಾಗಿ ರಾಮಮಂದಿರ ನಿರ್ಮಾಣಕ್ಕೆ ಉಡುಪಿಯಲ್ಲಿ ಮುಹೂರ್ತ ದಿನಾಂಕ ಪ್ರಕಟವಾಗಲಿದೆ ಎನ್ನುವ ಸುದ್ದಿ ಹರಿದಾಡಲು ಆರಂಭಿಸಿದೆ.

ಪೇಜಾವರ ಶ್ರೀ ಹೇಳಿದ್ದು ಏನು?
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ರಾಮ ಮಂದಿರ ನಿರ್ಮಾಣಕ್ಕೆ ಮೂರು ಮಾರ್ಗಗಳಿವೆ. ಸಂಧಾನದ ಮೂಲಕ ಮಂದಿರ ನಿರ್ಮಾಣ ಸಾಧ್ಯ. ಕೋರ್ಟ್ ಮೂಲಕ ವ್ಯಾಜ್ಯ ಪರಿಹರಿಸಿಕೊಳ್ಳುವ ಮಾರ್ಗವೂ ಇದೆ. ಅದಕ್ಕಿಂತ ಹೆಚ್ಚಾಗಿ ಕೇಂದ್ರ ಮತ್ತು ಉತ್ತರಪ್ರದೇಶ ರಾಜ್ಯ ಸರ್ಕಾರ ರಾಮ ಮಂದಿರದ ಪರವಾಗಿಯೇ ಇರುವುದರಿಂದ ಕಾರ್ಯಸೂಚಿ ಹೊರಡಿಸಬಹುದು ಎಂದು ಹೇಳಿದ್ದಾರೆ.

ಗುಜರಾತ್, ಕರ್ನಾಟಕ ಚುನಾವಣೆಗೆ ಇದೆ ಲಿಂಕ್!
ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೂ ಗುಜರಾತ್ ಚುನಾವಣೆಗೂ ಲಿಂಕ್ ಇದೆ. ಡಿಸೆಂಬರ್ 6ಕ್ಕೆ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕರೆ ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಅದು ಮತವಾಗಿ ಪರಿವರ್ತನೆ ಆಗುವುದರಲ್ಲಿ ಸಂಶಯವೇ ಇಲ್ಲ. ಇದನ್ನೇ ವಿಷಯವಾಗಿಟ್ಟುಕೊಂಡು ಹೆಚ್ಚು ಸೀಟುಗಳನ್ನು ಗೆಲ್ಲಲು ರಣತಂತ್ರವನ್ನು ಮೋದಿ ಮತ್ತು ಅಮಿತ್ ಶಾ ಹೂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಗುಜರಾತ್ ನಲ್ಲಿ ಮೊದಲ ಹಂತದ ಚುನಾವಣೆ ಡಿಸೆಂಬರ್ 9ರಂದು ನಡೆದರೆ ಎರಡನೇ ಹಂತದ ಚುನಾವಣೆ ಡಿಸೆಂಬರ್ 18 ರಂದು ನಡೆಯಲಿದೆ.

2018ರ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮ ಮಂದಿರ ಟ್ರಂಪ್ ಕಾರ್ಡ್ ಆಗಲಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜೊತೆ ಹಳೆ ಮೈಸೂರು ಭಾಗದ ಜನರನ್ನು ಬಿಜೆಪಿ ಸೆಳೆಯಬಹುದು ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

Leave a Reply

Your email address will not be published. Required fields are marked *