Connect with us

Districts

ದಾರಿದೀಪ ಇಲ್ಲದ್ದಕ್ಕೆ ಗ್ರಾಮಸ್ಥರಿಂದ ಗ್ಯಾಸ್ ಲೈಟ್ ಫಿಕ್ಸ್

Published

on

ಉಡುಪಿ: ದಾರಿದೀಪ ಕೆಟ್ಟು ತಿಂಗಳಾದರೂ ಸರಿಪಡಿಸದ ಮೆಸ್ಕಾಂ ವಿರುದ್ಧ ಜಿಲ್ಲೆಯ ಕುಕ್ಕಿಕಟ್ಟೆಯ ಜನ ವಿಶಿಷ್ಟ ಪ್ರತಿಭಟನೆ ಮಾಡಿದ್ದಾರೆ.

ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಕ್ಕಿಕಟ್ಟೆಯ ಕಲ್ಯಾಣನಗರ ಸಮೀಪ ಬೀದಿ ದೀಪ ಕೆಟ್ಟು ತಿಂಗಳುಗಳೇ ಕಳೆದಿದೆ. ರಿಪೇರಿ ಮಾಡಿ ಎಂದು ಸಾರ್ವಜನಿಕರು ಎಷ್ಟೇ ಅಂಗಲಾಚಿದರೂ ಅಧಿಕಾರಿಗಳು ಮಾತ್ರ ದಾರಿದೀಪ ಸರಿಮಾಡುವ ಗೋಜಿಗೇ ಹೋಗಿರಲಿಲ್ಲ.

ಇತ್ತೀಚೆಗೆ ಮಳೆ ಸಂದರ್ಭದಲ್ಲಿ ಹೈ ಮಾಸ್ಕ್ ದೀಪದ ಕಂಬ ಶಾಕ್ ಹೊಡೆಯಲಾರಂಭಿಸಿದೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯಿಂದ ಬೇಸತ್ತ ಸ್ಥಳೀಯರು ಗ್ಯಾಸ್ ಲೈಟ್ ನೇತುಹಾಕಿ ಪ್ರತಿಭಟನೆ ಮಾಡಿದ್ದಾರೆ. ಮೆಸ್ಕಾಂ ದೀಪ ಸರಿ ಮಾಡಿಕೊಡದಿದ್ದರೆ ಗ್ಯಾಸ್ ಲೈಟ್ ಉರಿಸಿ ಸಾರ್ವಜನಿಕರ ಓಡಾಟಕ್ಕೆ ಸಹಕಾರಿಯಾಗುವಂತೆ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ನೇರ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಸ್ಥಳೀಯ ನಿವಾಸಿ ರಾಜೇಶ್ ಶೆಟ್ಟಿಯವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೇ ಒಂದು ಸರ್ಕಾರಿ ಸಂಸ್ಥೆಗೆ ಜನಪ್ರತಿನಿಧಿ ಎಂದು ಆಯ್ಕೆಯಾದವರು ಇದ್ದರೆ ಮಾತ್ರ ಅದು ಮುಂದುವರಿಯಲು ಸಾಧ್ಯ. ಇದಕ್ಕೆ ಉಡುಪಿಯ ನಗರಸಭೆ ಉತ್ತಮ ನಿದರ್ಶನವಾಗಿದೆ. ಉಡುಪಿ ನಗರ ಸಭೆ ಪ್ರಾರಂಭವಾಗಿ ಇಷ್ಟು ವರ್ಷವಾದರೂ ಯಾವೊಬ್ಬ ಚುನಾಯಿತರೂ ಅಧಿಕಾರ ಸ್ವೀಕಾರ ಮಾಡಿಲ್ಲ ಎಂದರು.

ಸಮೀಪದ ಕುಕ್ಕಿಕಟ್ಟೆಯಲ್ಲಿ ಬೀದಿ ದೀಪ ಇದ್ದು, ಹೈ ಮಾಸ್ಕ್ ಲೈಟ್‍ಗಳಿವೆ. ಇವುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿ ಈಗಾಗಲೇ 3 ತಿಂಗಳು ಕಳೆದಿದೆ. ಈ ಮೂರು ತಿಂಗಳು ನಿರಂತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಕಂಬದಲ್ಲಿ ವಯರ್ ಗಳು ತಾಗಿ ಕರೆಂಟ್ ಶಾಕ್ ಹೊಡೆಯುತ್ತಿದೆ. ಕಂಬದ ಪಕ್ಕವೇ ಶಾಲೆಯ ಮಕ್ಕಳು ಸಂಚರಿಸುತ್ತಾರೆ. ಟೆಂಪೋಗಳ ನಿಲುಗಡೆಯಾಗುತ್ತದೆ. ಅಲ್ಲದೆ ರಿಕ್ಷಾ ನಿಲ್ದಾಣವೂ ಇದೆ. ಯಾರದರೂ ಅಲ್ಲಿ ಕರೆಂಟ್ ಶಾಕ್ ಹೊಡೆದು ಸಾಯೋದನ್ನು ಮೆಸ್ಕಾಂ ಮತ್ತು ನಗರಸಭೆ ಕಾಯುತ್ತಿದೆ ಎಂದು ರಾಜೇಶ್ ಕಿಡಿಕಾರಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಒಗ್ಗಟ್ಟಾಗಿ ಸೋಮವಾರ ಗ್ಯಾಸ್ ಲೈಟನ್ನು ಕಟ್ಟಿ ರಸ್ತೆಯಲ್ಲಿ ಹೋಗುವವರಿಗೆ ಬೆಳಕು ನೀಡಿದ್ದಾರೆ. ಈ ಮೂಲಕ ಸ್ಥಳೀಯರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ನಗರದಲ್ಲಿ ಅರ್ಧಕರ್ಧ ವಿದ್ಯುತ್ ದೀಪಗಳೇ ಉರಿಯುತ್ತಿಲ್ಲ. ಜನನ-ಮರಣ ಪತ್ರಕ್ಕೆ ಹೋದವರಿಂದ ಹಣ ವಸೂಲಿ ಮಾಡುವುದು ಬಿಟ್ಟರೆ ಇಡೀ ನಗರಸಭೆಯಿಂದ ಬೇರೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ರಾಜೇಶ್ ಗಂಭೀರ ಆರೋಪ ಮಾಡಿದರು.