Monday, 17th June 2019

ತೆರೆ ಕಾಣುವ ಮೊದಲೇ ಹೆಚ್ಚಿದ ಬೇಡಿಕೆ, ಮಲಯಾಳಂಗೆ ಡಬ್ ಆಯ್ತು ‘ಉದ್ಘರ್ಷ’

ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ದಶಕಗಳ ನಂತರ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡ್ತಾರೆ ಅಂದಾಗಲೇ ಅವರ ಅಭಿಮಾನಿಗಳಲ್ಲಿ ಪುಳಕವುಂಟಾಗಿತ್ತು. ಇನ್ನು ದೇಸಾಯಿ ಉದ್ಘರ್ಷ ಚಿತ್ರದ ಫಸ್ಟ್‌ಲುಕ್, ಫಸ್ಟ್‌ಲುಕ್ ಟೀಸರ್, ಪೋಸ್ಟರ್ಸ್ ಒಂದಕ್ಕೊಂದು ವಿಭಿನ್ನವಾಗಿದ್ದು ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.


ಈ ನಡುವೆ ಇದೇ ಮೊದಲ ಬಾರಿಗೆ ಸುನೀಲ್ ಕುಮಾರ್ ದೇಸಾಯಿ ಬಹು ಭಾಷಾ ಚಿತ್ರ ಮಾಡಿದ್ದು ಉದ್ಘರ್ಷ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ, ತಮಿಳಿಗೆ ಉಚ್ಚಕಟ್ಟಂ ಅನ್ನೋ ಹೆಸರಿನಲ್ಲಿ ಡಬ್ ಕೂಡ ಮಾಡಿದ್ದಾರೆ. ಆದ್ರೆ, ಈಗ ಲೇಟೆಸ್ಟ್ ವಿಷಯವೆಂದರೆ, ದೇಸಾಯಿ ಚಿತ್ರಕ್ಕೆ ಮಲಯಾಳಂನಲ್ಲೂ ಬೇಡಿಕೆ ಬಂದಿದ್ದು, ಆ ಭಾಷೆಗೂ ಚಿತ್ರವನ್ನು ದೇಸಾಯಿ ಡಬ್ ಮಾಡಿದ್ದಾರೆ. ದೇಸಾಯಿ ಚಿತ್ರಗಳು ಈ ಹಿಂದೆಯೂ ಮಲಯಾಳಂಗೆ ಡಬ್ ಆಗಿದ್ದವು.

ಈ ಬಗ್ಗೆ ವಿವರಣೆ ನೀಡಿರೋ ದೇಸಾಯಿ, ನನ್ನ ತರ್ಕ, ನಿಷ್ಕರ್ಷ, ಮರ್ಮ ಚಿತ್ರ ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೇ ಹಿನ್ನೆಲೆಯಲ್ಲಿ ಮಲಯಾಳಂ ಇಂಡಸ್ಟ್ರೀಯಿಂದ ಉದ್ಘರ್ಷಕ್ಕೂ ಬೇಡಿಕೆ ಬಂದ ಹಿನ್ನೆಲೆ, ನಾವೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಈ ಗಾಗಲೇ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಮುಗಿದಿದ್ದು ಮಲಯಾಳಂ ಭಾಷೆಯ ಡಬ್ಬಿಂಗ್ ಕಾರ್ಯವೂ ಭರದಿಂದ ಸಾಗಿದೆ ಅಂತಾ ಹೇಳಿದ್ದಾರೆ. ಅಲ್ಲದೇ, ಅವರೇ ಹೇಳುವಂತೆ ಶೀಘ್ರದಲ್ಲಿಯೇ ನಾಲ್ಕೂ ಭಾಷೆಗಳಲ್ಲಿ ಶೀಘ್ರದಲ್ಲಿಯೇ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗುತ್ತಿದೆಯಂತೆ.


ಯಾರೆಲ್ಲ ನಟಿಸಿದ್ದಾರೆ ಗೊತ್ತಾ..?!
ಇನ್ನು, ಚಿತ್ರದಲ್ಲಿ ಸಿಂಗಂ 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ, ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರು ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *