Connect with us

Bengaluru City

ಮತ್ತೆ ಗಡಿ ಕ್ಯಾತೆಗೆ ತೆಗೆದ ‘ಮಹಾ’ ಸಿಎಂ

Published

on

ಬೆಂಗಳೂರು: ಬೆಳಗಾವಿ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಪದೇ ಪದೇ ಕೆದಕುತ್ತಿದೆ. ಕಾಲ್ಕೆರೆದು ಕರ್ನಾಟಕದ ಮೇಲೆ ಕದನಕ್ಕೆ ಬರುತ್ತಿದೆ. ಇಂದು ಮುಂಬೈನಲ್ಲಿ ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ: ಸಂಘರ್ಷ ಅನಿ ಸಂಕಲ್ಪ ಹೆಸರಿನ ಮರಾಠಿ ಪುಸ್ತಕ ರಿಲೀಸ್ ಮಾಡಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇರುವಾಗ್ಲೇ ಕರ್ನಾಟಕ ತನ್ನಿಷ್ಟದಂತೆ ನಡೆದುಕೊಳ್ತಿದೆ. ಕರ್ನಾಟಕದ ಕೃತ್ಯಗಳು ನ್ಯಾಯಾಂಗ ನಿಂದನೆಗೆ ಸಮ ಎಂದು ನಾಲಗೆ ಹರಿಬಿಟ್ಟಿದ್ದಾರೆ. ಅವರು ಬೆಳಗಾಂ ಅನ್ನು ಬೆಳಗಾವಿ ಎಂದು ಬದಲಿಸಿದ್ದಾರೆ. ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿಸಿದ್ದಾರೆ. ವಿಧಾನಸೌಧ ನಿರ್ಮಿಸಿ ಅಧಿವೇಶನ ಕೂಡ ನಡೆಸಿದ್ದಾರೆ ಅಂತೆಲ್ಲಾ ಭಾಷಣ ಬಿಗಿದಿದ್ದಾರೆ. ಈ ಸಂದರ್ಭಕ್ಕೆ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿ ಮುಖಂಡ ಪ್ರವೀಣ್ ಧಾರೇಕರ್ ಸಾಕ್ಷಿ ಆಗಿದ್ದಾರೆ.

”ರಹೆಂಗೇ ತೋ ಮಹಾರಾಷ್ಟ್ರ ಮೇ.. ನಹೀ ತೋ ಜೇಲ್ ಮೇ” ಎಂದು ಎಂಇಎಸ್ ಪುಂಡರು ಘೋಷಣೆ ಬೇರೆ ಕೂಗಿದ್ದಾರೆ. ಇನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್ ಕೊನೆ ಕ್ಷಣದಲ್ಲಿ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಈ ವಿವಾದಿತ ಕೃತಿಯಲ್ಲಿ ಗಡಿ ವಿವಾದ ಬಗ್ಗೆ ಮಹಾರಾಷ್ಟ್ರದ ನಿಲುವನ್ನು ಉಲ್ಲೇಖಿಸಲಾಗಿದೆ. 1956ರಿಂದ 2021ರವರೆಗೂ ನಡೆದ ಘಟನೆಗಳನ್ನು ಅವರ ಮೂಗಿನ ನೇರಕ್ಕೆ ಉಲ್ಲೇಖಿಸಲಾಗಿದೆ. ಈ ಕೃತಿಯ ಮೂಲಕ ಕರ್ನಾಟಕ ಸರ್ಕಾರ ಮರಾಠಿಗರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದೆ ಎಂದು ಬಿಂಬಿಸಲು ಹೊರಟಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ರು. ಗಡಿ ವಿಚಾರದಲ್ಲಿ ಎಮೋಷನಲ್ ಬ್ಲಾಕ್‍ಮೇಲ್ ಮಾಡಲು ಹೊರಟಿದ್ದಾರೆ. ಅದಕ್ಕೆ ಮಹತ್ವ ಕೊಡಬೇಡಿ ಎಂದರು. ನಾಡದ್ರೋಹಿ ಎಂಇಎಸ್ ಬ್ಯಾನ್ ಮಾಡಬೇಕು ಅಂತಾ ಸಚಿವ ತಮ್ಮದೇ ಸರ್ಕಾರವನ್ನು ಸಚಿವ ಶ್ರೀಮಂತ ಪಾಟೀಲ್ ಒತ್ತಾಯಿಸಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ವೀರ ಕನ್ನಡಿಗರದ್ದು ಎಂದು ಠಾಕ್ರೆಗೆ ಟಾಂಗ್ ಕೊಟ್ಟಿದ್ದಾರೆ.

ಠಾಕ್ರೆ ಚರಿತ್ರೆ ಓದಲಿ ಹೆಚ್‍ಡಿಕೆ ಟಾಂಗ್: ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ. ನಾವು ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಿ, ವಿಧಾನಸೌಧ ನಿರ್ಮಿಸಿ, ಅಧಿವೇಶನ ನಡೆಸಿರುವುದನ್ನು ತಪ್ಪು ಎಂದೂ ಹೇಳಿದ್ದಾರೆ. ಠಾಕ್ರೆ ಅವರೇ ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು.

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ಬೆಳಗಾವಿ ವಿಚಾರದಲ್ಲಿ ಸಲ್ಲದ ಕಿತಾಪತಿ ಮಾಡುತ್ತವೆ ಎಂಬುದನ್ನು ಅರಿತೇ ನನ್ನ ಸರ್ಕಾರದ ಅವಧಿಯಲ್ಲಿ ಅಲ್ಲಿ ವಿಧಾನಸೌಧ ನಿರ್ಮಿಸಲಾಯಿತು. ಅಧಿವೇಶನವನ್ನೂ ನಡೆಸಲಾಯಿತು. ಬೆಳಗಾವಿಯ ಸುವರ್ಣ ಸೌಧ ಮಹಾರಾಷ್ಟ್ರದ ವಿಸ್ತರಣಾವಾದವನ್ನು ವಿರೋಧಿಸಿ ನಿಂತಿರುವ, ಕನ್ನಡಿಗರ ಸ್ವಾಭಿಮಾನಿ ಸೌಧ.

ಮಹಾರಾಷ್ಟ್ರದ ಹಠದಿಂದಲೇ ರಚನೆಯಾದ ಮಹಾಜನ ಸಮಿತಿ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಒಪ್ಪದ ಮಹಾರಾಷ್ಟ್ರ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿರುವ ಪ್ರಕರಣವೊಂದರ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತಾಡುತ್ತಿರುವ ಉದ್ಧವ ಠಾಕ್ರೆ, ವಿಚಾರಣೆಯ ದಿಕ್ಕನ್ನೇ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ.

ಮಹಾರಾಷ್ಟ್ರ ಚೀನಾದಂತೆ ಮಾತನಾಡುವುದನ್ನು ಮೊದಲು ಬಿಡಬೇಕು. ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಅವರ ಮನಸ್ಸುಗಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಬಾರದು. ಗಡಿ ಎಂದ ಮೇಲೆ ಅದು ಎರಡು ಭಾಷೆ, ಎರಡೂ ರಾಜ್ಯಗಳ ಜನರ ಸಂಗಮ. ಅದರಲ್ಲಿ ನಮ್ಮವರೇ ಹೆಚ್ಚು, ನಾವೇ ಶಕ್ತಿವಂತರು ಎಂಬ ವಾದ ಸರಿಯಲ್ಲ.

ಇನ್ನೊಂದು ವಿಷಯ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂದಾಗ ಠಾಕ್ರೆಗೆ ಒಂದು ಸಲಹೆ ನೀಡಿದ್ದೆ. ಕರ್ನಾಟಕ-ಮಹಾರಾಷ್ಟ್ರದ ಇತಿಹಾಸ ಓದಬೇಕೆಂಬುದು ಆ ಸಲಹೆ ಆಗಿತ್ತು. ಚರಿತ್ರೆ ಓದಿದ್ದರೆ ಮಹಾರಾಷ್ಟ್ರವು ಕನ್ನಡರಸರಿಂದ ಆಳಿಸಿಕೊಂಡ ನಾಡು ಎಂಬುದು ಅವರಿಗೂ ತಿಳಿಯುತ್ತಿತ್ತು. ಅವರು ಓದಿದಂತೆ ಕಾಣುತ್ತಿಲ್ಲ. ಚರಿತ್ರೆ ಓದಿ.

ಶಿವಸೇನೆಯೊಂದಿಗೆ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷ ಗಡಿ ವಿಚಾರದಲ್ಲಿ ಉದ್ಧವ ಠಾಕ್ರೆಗೆ ಬುದ್ಧಿ ಹೇಳಬೇಕು. ರಾಜ್ಯ ಕಾಂಗ್ರೆಸ್ ನಾಯಕರು ಬಾಯಿ ಉಪಚಾರಕ್ಕೆ ಠಾಕ್ರೆ ಮಾತುಗಳನ್ನು ಖಂಡಿಸಿದರೆ ಸಾಲದು. ಬದಲಿಗೆ ಬೆಳಗಾವಿ ನಮ್ಮದೇ ಎಂಬುದನ್ನು ಮನದಟ್ಟು ಮಾಡಬೇಕು. ಬೆಳಗಾವಿ ಬಗೆಗೆ ಠಾಕ್ರೆಗೆ ಇರುವ ಭ್ರಮೆಗೆ ಚಿಕಿತ್ಸೆ ಕೊಡಿಸಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *