Friday, 26th April 2019

ಹಿಂದೆಯಿಂದ ಡಿಕ್ಕಿ ಹೊಡೆದಿದ್ದರಿಂದ ಮುಂದಿದ್ದ ಕ್ಯಾಂಟರ್‌ಗೆ ಗುದ್ದಿದ ಕಾರು- ಇಬ್ಬರ ದುರ್ಮರಣ

ಹಾವೇರಿ: ನಿಂತಿದ್ದ ಕ್ಯಾಂಟರ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಮತ್ತೋರ್ವ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸ್ನಳ್ಳಿ ಗ್ರಾಮದ ಬಳಿ ಇರೋ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

ಚಾಲಕ ನಾಗರಾಜ್ (37) ಮತ್ತು ಇಂದುಧರ ಪಾಟೀಲ್ (38) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಾಯಾಗೊಂಡಿರುವ ಪ್ರವೀಣ್ ಅವರನ್ನು ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ರಾತ್ರಿ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಬರುತ್ತಿತ್ತು. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದ ಪರಿಣಾಮ ಚಲಿಸುತ್ತಿದ್ದ ಕಾರಿಗೆ ಹಿಂದಿನಿಂದ ವೇಗವಾಗಿ ಬಂದು ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮುಂದೆ ನಿಂತಿದ್ದ ಮತ್ತೊಂದು ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಘಟನೆ ನಂತರ ಕಾರಿಗೆ ಡಿಕ್ಕಿ ಹೊಡೆದ ಕ್ಯಾಂಟರ್ ಚಾಲಕ ಪರಾರಿ ಆಗಿದ್ದು, ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *