Connect with us

Crime

ತಂದೆಯ ಸಿನಿಮಾ ನಿರ್ಮಾಣಕ್ಕೆ ಆಡು ಕಳ್ಳತನಕ್ಕೆ ಇಳಿದ ಸಹೋದರರು ಅರೆಸ್ಟ್

Published

on

ಚೆನ್ನೈ: ತಂದೆಯ ಸಿನಿಮಾ ನಿರ್ಮಾಣಕ್ಕೆ ಆಡು ಕಳ್ಳತನಕ್ಕೆ ಇಳಿದ ಸಹೋದರರನ್ನು ಬಂಧಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ತಂದೆ ನಿರ್ಮಿಸುತ್ತಿರುವ ಚಲನಚಿತ್ರವೊಂದಕ್ಕೆ ಹಣ ನೀಡಲು ಆಡುಗಳನ್ನು ಕದ್ದ ಆರೋಪದ ಮೇಲೆ ಇಬ್ಬರು ಸಹೋದರರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಆಡು ಕದ್ದಿರುವ ಆರೋಪಿ ನ್ಯೂ ವಾಷರ್‍ಮೆನ್‍ಪೇಟ್‍ನ ವಿ ನಿರಂಜನ್ ಕುಮಾರ್ (30) ಮತ್ತು ಲೆನಿನ್ ಕುಮಾರ್ (32) ಎಂದು ಗುರುತಿಸಲಾಗಿದೆ. ಈ ಇಬ್ಬರು ಖತರ್ನಾಕ್ ಸಹೋದರನ್ನು ಮಾಧವರಂ ಪೊಲೀಸ ಬಂಧಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಇಬ್ಬರು ಸಹೋದರರು ಆಡುಗಳನ್ನು ಕದಿಯುತ್ತಿದ್ದರು. ದಿನಕ್ಕೆ ಎಂಟರಿಂದ ಹತ್ತು ಆಡುಗಳನ್ನು ಕದ್ದು ತಲಾ 8 ಸಾವಿರ ರೂ. ಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಇಬ್ಬರು ಆರೋಪಿಗಳು ರಸ್ತೆಬದಿಯ ಮೇಯಿಸುವ ಪ್ರಾಣಿಗಳನ್ನು ಹುಡುಕುತ್ತಾ ನಿರ್ಜನ ಪ್ರದೇಶಗಳಲ್ಲಿ ಓಡುತ್ತಿದ್ದರು. ಯಾರೂ ಇಲ್ಲದೇ ಇರುವ ಸಮಯ ನೋಡಿಕೊಂಡು ಆಡುಗಳನ್ನು ತಮ್ಮ ಕಾರಿಗೆ ಕಟ್ಟಿಕೊಂಡು ಸ್ಥಳದಿಂದ ಪಾರರಿಯಾಗುತ್ತಿದ್ದರು. ಕಳ್ಳತನ ಮಾಡಿರುವ ಜಾಗದಲ್ಲಿಯೇ ಮತ್ತೆ ಮತ್ತೆ ಕೃತ್ಯ ಎಸಗುತ್ತಿದ್ದರು.

ಸಿಕ್ಕಿ ಬಿದ್ದಿದ್ದು ಹೇಗೆ?
ಅಕ್ಟೋಬರ್ 9 ರಂದು ಪಳನಿಯಿಂದ ಮೇಕೆ ಕದ್ದಾಗ ಇವರಿಬ್ಬರ ಅದೃಷ್ಟ ಕೈ ಕೊಟ್ಟಿತ್ತು. ಒಂದು ಅಥವಾ ಎರಡು ಆಡುಗಳನ್ನು ಕಳೆದುಕೊಂಡರೆ ಜನರು ದೂರು ನೀಡುವುದಿಲ್ಲ ಎಂದು ನಂಬಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಪಳಾನಿಯಲ್ಲಿ ಕೇವಲ ಅರ್ಧ ಡಜನ್ ಆಡುಗಳಿರುವ ದೊಡ್ಡಿಯಿಂದ ಆಡನ್ನು ಕದ್ದಿದ್ದರು. ಈ ಸಂಬಂಧ ಮಾಲೀಕ ಠಾಣೆಯಲ್ಲಿ ದೂರು ನೀಡಿದ್ದ.

ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದರೂ ಕಳ್ಳರ ಕಾರಿನ ನೋಂದಣಿ ಸಂಖ್ಯೆ ಸರಿಯಾಗಿ ಕಾಣಿಸಲಿಲ್ಲ. ತನಿಖೆಗೆ ಇಳಿದ ಪೊಲೀಸರಿಗರ ಈ ಜಾಗದಲ್ಲಿ ಬಹಳಷ್ಟು ಜನರು ಒಂದು ಅಥವಾ ಎರಡು ಆಡುಗಳನ್ನು ಕಳೆದುಕೊಂಡ ವಿಚಾರ ತಿಳಿಯುತ್ತದೆ.

ಈ ಕೃತ್ಯವನ್ನು ಬಯಲು ಮಾಡಲೇಬೇಕೆಂದು ಪಣ ತೊಟ್ಟ ಪೊಲೀಸರು ರಾತ್ರಿ ವೇಳೆ ಸಿವಿಲ್ ಬಟ್ಟೆ ತೊಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಒಂದು ದಿನ ಇಬ್ಬರು ಆರೋಪಿಗಳು ಮೇಕೆ ಕದಿಯಲು ಪ್ರಯತ್ನಿಸುತ್ತಿದ್ದಾಗ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ಹಿಡಿದಿದ್ದಾರೆ.

ಕಳ್ಳತನ ಯಾಕೆ?
ಆಡು ಕಳ್ಳರ ತಂದೆ ವಿಜಯ್ ಶಂಕರ್ ಆಗಿದ್ದು ‘ನೀ ಥಾನ್ ರಾಜಾ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಣದ ಸಮಸ್ಯೆಯಿಂದ ಈ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಈ ಚಿತ್ರದಲ್ಲಿ ಇಬ್ಬರು ಸಹೋದರರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಾರಣಕ್ಕೆ ಸಹೋದರರು ಹಣದ ಸಮಸ್ಯೆ ಸರಿದೂಗಿಸಲು ಕಳ್ಳತನಕ್ಕೆ ಇಳಿದಿದ್ದರು.

Click to comment

Leave a Reply

Your email address will not be published. Required fields are marked *