Friday, 23rd August 2019

Recent News

ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ

ಶಿವಮೊಗ್ಗ: ಮೆಡಿಕಲ್ ಲ್ಯಾಬೋರೇಟರಿಯಲ್ಲಿ ಇಬ್ಬರು ಬಾಲಕರು ಚಾಣಾಕ್ಷತನದಿಂದ ಎಟಿಎಂ ಎಗರಿಸಿ, 20 ಸಾವಿರ ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಭದ್ರಾವತಿ ತಾಲೂಕಿನ ಮತ್ತಿಗಟ್ಟದ ಮಲ್ಲೇಶಪ್ಪ ಎಟಿಎಂ ಜೊತೆ ಹಣವನ್ನೂ ಕಳೆದುಕೊಂಡ ವ್ಯಕ್ತಿ. ಇದೇ ವರ್ಷ ಮಾರ್ಚ್ 7 ರಂದು ಮಲ್ಲೇಶಪ್ಪ ಅವರು ತಮ್ಮ ಮಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ.

ನಗರದ ಪಾರ್ಕ್ ಬಡಾವಣೆಯಲ್ಲಿರುವ ಮಲ್ನಾಡ್ ಡಯಾಗ್ನೋಸ್ಟಿಕ್‍ಗೆ ಮಗಳನ್ನು ಮಲ್ಲೇಶಪ್ಪ ಕರೆದುಕೊಂಡು ಬಂದಿದ್ದರು. ಮಲ್ಲೇಶಪ್ಪ ಅವರು ತಮ್ಮ ಎಟಿಎಂ ಮೂಲಕ ಲ್ಯಾಬ್ ಶುಲ್ಕ ಪಾವತಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಬಾಲಕರು ಎಟಿಎಂ ಪಿನ್ ನಂಬರ್ ತಿಳಿದುಕೊಂಡಿದ್ದಾರೆ. ಮಲ್ಲೇಶಪ್ಪ ಅವರನ್ನು ಹಿಂಬಾಲಿಸಿ, ರಿಪೋರ್ಟ್ ಗಾಗಿ ಕಾಯುತ್ತಿದ್ದ ವೇಳೆ ಚಾಣಾಕ್ಷತನದಿಂದ ಎಟಿಎಂ ಕಾರ್ಡ್ ಕಳ್ಳತನ ಮಾಡಿದ್ದಾರೆ.

ತಕ್ಷಣವೇ ಅಲ್ಲಿಂದ ಪರಾರಿಯಾದ ಬಾಲಕರು ಸಮೀಪದ ಎಟಿಎಂನಲ್ಲಿ 20 ಸಾವಿರ ರೂ. ಡ್ರಾ ಮಾಡಿದ್ದಾರೆ. ಲ್ಯಾಬಿನಲ್ಲಿಯೇ ಕಾರ್ಡ್ ಕಳೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಇಂದು ವಿಚಾರಿಸಲು ಮಲ್ಲೇಶಪ್ಪ ಬಂದಿದ್ದರು. ಆಗ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕರ ಕರಾಮತ್ತು ಬೆಳಕಿಗೆ ಬಂದಿದೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *