Connect with us

Crime

ಭೀಕರ ಅಪಘಾತದಲ್ಲಿ ಕಿರುತೆರೆ ನಟಿಯರಿಬ್ಬರ ದುರ್ಮರಣ

Published

on

ಹೈದರಾಬಾದ್: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೆಲುಗು ಕಿರುತೆರೆಯ ನಟಿಯರಿಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕಿರುತೆರೆ ನಟಿ ಭಾರ್ಗವಿ(20) ಮತ್ತು ಅನುಷಾ ರೆಡ್ಡಿ(21) ಮೃತ ದುರ್ದೈವಿಗಳು. ಚೆವೆಲ್ಲಾದಲ್ಲಿನ ಅಪ್ಪರೆಡ್ಡಿ ಬಸ್ ನಿಲ್ದಾಣದ ಬಳಿ ಈ ಅಪಘಾತ ನಡೆದಿದ್ದು, ಇಬ್ಬರು ನಟಿಯರು ಧಾರಾವಾಹಿಯ ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಧಾರಾವಾಹಿಯ ಮುಂದಿನ ದೃಶ್ಯಗಳನ್ನು ಶೂಟಿಂಗ್ ಮಾಡಲು ತಂಡದೊಂದಿಗೆ ಅನಂತಗಿರಿ ಅರಣ್ಯಕ್ಕೆ ಹೋಗಿದ್ದರು. ಅಲ್ಲಿ ಕೆಲವು ದೃಶ್ಯಗಳ ಶೂಟಿಂಗ್ ಮುಗಿಸಿ ಮಂಗಳವಾರ ರಾತ್ರಿ ಹೈದರಾಬಾದಿಗೆ ಹಿಂದಿರುಗುತ್ತಿದ್ದರು. ಚಾಲಕ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಅನುಷಾ ಮತ್ತು ಭಾರ್ಗವಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಭಾರ್ಗವಿ ತೆಲಂಗಾಣ ನಿವಾಸಿಯಾಗಿದ್ದು, ‘ಮುತ್ಯಾಲ ಮುಗ್ಗು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.