Connect with us

Dharwad

ಕಟ್ಟಡ ಕುಸಿದ ಪ್ರಕರಣದಲ್ಲಿ ಟ್ವಿಸ್ಟ್ – ದೂರು ನೀಡಿದ್ದ ಅಧಿಕಾರಿಯೇ ಅಮಾನತು!

Published

on

                                 ಸಂತೋಷ ಆಣಿಶೆಟ್ಟರ್                          ಮುಕುಂದ ಜೋಶಿ

ಧಾರವಾಡ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದ ಅಧಿಕಾರಿಯನ್ನೇ ಅಮಾನತು ಮಾಡಲಾಗಿದೆ.

ಪಾಲಿಕೆಯ ವಲಯ ಆಯುಕ್ತ ಮುಕುಂದ ಜೋಶಿ ಮತ್ತು ಸಹಾಯಕ ಆಯುಕ್ತ ಸಂತೋಷ ಆಣಿಶೆಟ್ಟರ್ ನನ್ನು ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರ ಮತ್ತು ಎಂಜಿನಿಯರ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಸಂತೋಷ ಆನಿಶೆಟ್ಟರ್ ದೂರು ನೀಡಿದ್ದನು. ಸಂತೋಷ ಆನಿಶೆಟ್ಟರ್ ವಲಯ ಕಚೇರಿ 3ರ ಸಹಾಯಕ ಆಯುಕ್ತನಾಗಿದ್ದನು. ಈ ವಲಯದ ಮೂಲಕವೇ ಕಟ್ಟಡಕ್ಕೆ ಅನುಮತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಈಗ ದೂರುದಾರನೂ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವುದರಿಂದ ಆನಿಶೆಟ್ಟರ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.

ಕಟ್ಟಡ ದುರಂತದಲ್ಲಿ ಇದೂವರೆಗೆ 15 ಜನರು ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಆರೋಪಿಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸವರಾಜ ನಿಗದಿ ಮತ್ತು ಗಂಗಪ್ಪ ಸಿಂತ್ರೆ  ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಉಪನಗರ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಆದೇಶದ ಮೇರೆಗೆ ಉಳಿದ ರವಿ ಸಬರದ್, ಮಹಾಬಳೇಶ್ವರ ಮತ್ತು ವಿವೇಕ್ ಪವಾರ್ ಎಂಬ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.