Thursday, 17th October 2019

Recent News

ಒಂದೇ ತಿಂಗ್ಳಲ್ಲಿ 20 ಮನೆಗಳ್ಳತನ – ಪೊಲೀಸರೇ ಕಳ್ಳತನ ಮಾಡಿಸ್ತಾರೆ ಎಂದ ಮಾಜಿ ಸಚಿವ

ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಕಳ್ಳತನ ಮಿತಿಮೀರಿದೆ. ಕಳೆದ ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ಕನ್ನಹಾಕಲಾಗಿದೆ ಎನ್ನಲಾಗಿದೆ. ಆದರೂ ಹೆಬ್ಬರೂ ಪೊಲೀಸರು ಕನಿಷ್ಠ ಪಕ್ಷ ದೂರು ದಾಖಲಿಸಿಕೊಳ್ಳದೇ ದಿವ್ಯ ಮೌನ ವಹಿಸಿದ್ದಾರೆ. ಪೊಲೀಸರೇ ನಿಂತು ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದಾದ ಮೇಲೊಂದು ಮನೆಗಳ್ಳತನ ಪ್ರಕರಣ ಬೆಳಕಿಗೆ ಬರುತ್ತಿವೆ. ಮನೆಯ ಬೀಗದ ಕೀಯನ್ನು ಕಿಟಕಿಯ ಪಕ್ಕದಲ್ಲೋ, ಬಾಗಿಲ ಮೇಲಕ್ಕೋ ಇಟ್ಟು ಹೋಗಿದ್ದನ್ನು ಗಮನಿಸುವ ಕಳ್ಳರು ಇಂತಹ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಡಹಗಲೇ ಇಂತಹ ಮನೆಗಳಿಗೆ ರಾಜಾರೋಷವಾಗಿ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಕೆಲ ಮನೆಗಳ ಬೀಗ ಮುರಿದು ಮಧ್ಯಾಹ್ನದ ವೇಳೆಯೇ ಕನ್ನ ಹಾಕಿದ್ದಾರೆ.

ಸೋಮವಾರದಂದು ಹುಳ್ಳೇಹಳ್ಳಿ ಗ್ರಾಮದಲ್ಲೂ ಕಳ್ಳತನ ಘಟನೆ ನಡೆದಿದೆ. ತಿಮ್ಮೇಗೌಡ ಎಂಬವರ ಮನೆಯ ಕಿಟಕಿ ಮೇಲಿದ್ದ ಬೀಗದ ಕೀ ಬಳಸಿಕೊಂಡು ಕಳ್ಳನೋರ್ವ ಮನೆಯೊಳಗೆ ಪ್ರವೇಶಿಸಿದ್ದಾನೆ. ಬೀರುವಿನಲ್ಲಿದ್ದ 1.5 ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದೇ ರೀತಿ ಡಿ.ಕೊರಟಗೆರೆ ಗ್ರಾಮದ ಕೃಷ್ಣಮೂರ್ತಿ ಆಚಾರ್ ಎಂಬವರ ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ನಡೆದಿದೆ. ಆದರೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುವುದು ಮನೆ ಮಾಲೀಕರ ಆರೋಪ. ಪ್ರಕರಣದ ಬಗ್ಗೆ ಕೇಳಲು ಹೋದರೆ ಕಳ್ಳರು ಸಿಕ್ಕಿದಾಗ ಕಳೆದು ಹೋದ ಮಾಲುಗಳನ್ನು ನಾವೇ ತಂದು ಕೊಡುತ್ತೇವೆ ಎಂದು ಸಮಾಧಾನ ಮಾಡಿ ಕಳಿಸುತ್ತಿದ್ದಾರೆ. ಅದರಲ್ಲೂ ಹೆಬ್ಬೂರು ಪೊಲೀಸ್ ಠಾಣೆಯವರಂತೂ ಕಳ್ಳರನ್ನು ಹಿಡಿಯುವ ಪ್ರಯತ್ನವೇ ಮಾಡುತಿಲ್ಲ ಎಂದು ಸಾರ್ವಜನಿಕರ ಆರೋಸಿಸುತ್ತಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, ಹೆಬ್ಬೂರು ಠಾಣೆಯ ಪೇದೆ ಪುಟ್ಟರಾಜು ಹಾಗೂ ಪಿಎಸ್‍ಐ ಶ್ರೀಕಾಂತರ ಕರಿನೆರಳಿನಲ್ಲಿ ಕಳ್ಳತನ ನಡಿಯುತ್ತಿದೆ. ಒಂದಿಷ್ಟು ಯುವಕರನ್ನು ಬಿಟ್ಟು ಪೊಲೀಸರೇ ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮನೆಗಳ್ಳತನದ ಜೊತೆಗೆ ಸರಗಳ್ಳತನ, ಹಸು-ಕುರಿಗಳ ಕಳ್ಳತನವೂ ಎಲ್ಲೆ ಮೀರಿದೆ. ಇವೆಲ್ಲದಕ್ಕೂ ಹೆಬ್ಬೂರು ಪೊಲೀಸರ ಕುಮ್ಮಕ್ಕು ಇದೆ. ಪೊಲೀಸರ ಪಾತ್ರ ಇಲ್ಲದೇ ಇದ್ದರೆ ಒಂದು ತಿಂಗಳಲ್ಲಿ ನಡೆದ ಸರಿಸುಮಾರು 20 ಪ್ರಕರಣದಲ್ಲಿ ಒಂದನ್ನಾದರೂ ಭೇದಿಸುತ್ತಿದ್ದರು ಅನ್ನೋದು ಸುರೇಶ್ ಗೌಡರ ವಾದವಾಗಿದೆ. ಒಟ್ಟಾರೆ ಗ್ರಾಮಾಂತರ ಕ್ಷೇತ್ರದಲ್ಲಿನ ಮನೆಗಳ್ಳತನದ ವಿಚಾರ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ.

Leave a Reply

Your email address will not be published. Required fields are marked *