Connect with us

Districts

ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

Published

on

ತುಮಕೂರು: ಅಧ್ಯಯನದ ಉದ್ದೇಶದಿಂದ ತರಿಸಿಕೊಳ್ಳಲಾದ ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಹಾರ ಹಾಕಿ ವಿಶೇಷವಾಗಿ ಬರಮಾಡಿಕೊಂಡ ಅಪರೂಪದ ಘಟನೆ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಬೆಳಗಾವಿ ಹಾರೋಗೇರಿ ಪಟ್ಟಣದಿಂದ ತರಿಸಿಕೊಳ್ಳಲಾದ ವ್ಯಕ್ತಿಯೊಬ್ಬರ ಮೃತದೇಹಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ (76) ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು.

ಶ್ರೀದೇವಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಮನವಿಯಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಮುಖಾಂತರ ಪಾಟೀಲರ ಮೃತದೇಹವನ್ನು ತುಮಕೂರಿಗೆ ತರಿಸಿಕೊಳ್ಳಲಾಯಿತು.

ಈ ವೇಳೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ಬಳಿಕ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ಸಾಗಿಸಲಾಯ್ತು. ಮೃತಪಟ್ಟ ನಂತರ ತನ್ನ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡಬೇಕೆಂಬ ಇಂಗಿತವನ್ನು ಹಣಮಂತ ಸಿದ್ದಪ್ಪ ಬಿರಾದಾರ್ ಪಾಟೀಲ್ ಅವರು ಬದುಕಿದ್ದಾಗಲೇ ವ್ಯಕ್ತಪಡಿಸಿದ್ದರು.