Connect with us

Crime

ಶ್ರೀಲಂಕಾ ದುರಂತದಲ್ಲಿ ತುಮಕೂರಿನ ಉದ್ಯಮಿ ಬಲಿ

Published

on

ತುಮಕೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ತುಮಕೂರು ಮೂಲದ ಉದ್ಯಮಿಯೊಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತುಮಕೂರು ನಗರದ ಸರಸ್ವತಿಪುರಂ ನಿವಾಸಿ ರಮೇಶ್ ಬಾಂಬ್ ಬ್ಲಾಸ್ಟ್ ನಲ್ಲಿ ಮೃತಪಟ್ಟಿದ್ದಾರೆ. ರಮೇಶ್ ಅವರು ಲಿಕ್ಕರ್ ಬಿಸಿನೆಸ್ ಮಾಡುತ್ತಿದ್ದು, ಪ್ರವಾಸಕ್ಕೆಂದು ನೆಲಮಂಗಲದ ಗೆಳೆಯರ ಜೊತೆ ಶನಿವಾರ ಸಂಜೆ ಶ್ರೀಲಂಕಾಕ್ಕೆ ತೆರಳಿದ್ದರು.

ಶನಿವಾರ ಶ್ರೀಲಂಕಾ ತೆರಳಿದ ಮೇಲೆ ಮನೆಯವರನ್ನು ರಮೇಶ್ ಸಂಪರ್ಕಿಸಿದ್ದರು. ಅಲ್ಲದೆ ಭಾನುವಾರ ಬೆಳಗ್ಗೆ ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಆದ್ರೆ ಬೆಳಗ್ಗೆ 8 ಗಂಟೆ ಸುಮಾರಿಗೆ ಸರಣಿ ಬಾಂಬ್ ಬ್ಲಾಸ್ಟ್ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ರಮೇಶ್ ಕುಟುಂಬದವರಲ್ಲಿ ಆತಂಕ ವ್ಯಕ್ತವಾಗಿದ್ದು, ಇದೀಗ ರಮೇಶ್ ಸಾವನ್ನಪಿರುವುದು ಅಧಿಕೃತವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಎರಡು ದಿನದ ಹಿಂದೆ ಬೆಂಗಳೂರಿನಿಂದ ಶ್ರೀಲಂಕಾಗೆ ನೆಲಮಂಗಲ ಮೂಲದ 7 ಮಂದಿ ಜೆಡಿಎಸ್ ಕಾರ್ಯಕರ್ತರು ಪ್ರವಾಸ ಕೈಗೊಂಡಿದ್ದರು. ಈ ತಂಡದಲ್ಲಿ ರಮೇಶ್ ಕೂಡ ಇದ್ದರು. ಬಾಂಬ್ ದಾಳಿಯಲ್ಲಿ ಹನುಮಂತರಾಯಪ್ಪ ಹಾಗೂ ರಂಗಪ್ಪ ಸಾವನ್ನಪ್ಪಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು. ಇದೀಗ ಗುಂಪಲ್ಲಿ ರಮೇಶ್ ಕೂಡ ಬಲಿಯಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದು, ಪಬ್ಲಿಕ್ ಟಿವಿ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಅಲ್ಲದೆ ನಾಳೆ ಭಾರತಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ 7 ಮಂದಿ ಜೆಡಿಎಸ್ ಕಾರ್ಯಕರ್ತರು ನಾಪತ್ತೆ – ಸಿಎಂ

ಮಂಗಳೂರಿನ ಬೈಕಂಪಾಡಿ ಮೂಲದ ರಝೀನಾ ಖಾದರ್ ಕುಕ್ಕಾಡಿ(58) ಕೂಡ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ಕೊಲಂಬೋದಲ್ಲಿ ನೆಲೆಸಿದ್ದ ಬಂಧುಗಳನ್ನು ಭೇಟಿಯಾಗಲೆಂದು ರಝೀನಾ ಪತಿಯೊಡನೆ ಶ್ರೀಲಂಕಾಕ್ಕೆ ತೆರಳಿದ್ದರು. ಅಲ್ಲಿನ ಶಾಂಗ್ರಿಲಾ ಹೊಟೇಲ್‍ನಲ್ಲಿ ರಝೀನಾ ಇದ್ದರೆ, ಅವರ ಪತಿ ದುಬೈಗೆ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಶಾಂಗ್ರಿಲಾ ಹೊಟೇಲ್‍ನಲ್ಲಿ ನಡೆದ ಸ್ಫೋಟದಲ್ಲಿ ರಝೀನಾ ಮೃತಪಟ್ಟಿದ್ದರು.

ಈವರೆಗೆ ವರದಿಯಾಗಿರುವ ಪ್ರಕಾರ ಬಾಂಬ್ ಸ್ಫೋಟದಲ್ಲಿ 290 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಶ್ರೀಲಂಕಾ ಪೊಲೀಸರು 24 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.