Tuesday, 16th July 2019

ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪವಾಡಸದೃಶ ರೀತಿಯಲ್ಲಿ 45 ನಿಮಿಷ ಸ್ವಂತವಾಗಿ ನಡೆದಾಡುವ ದೇವರು ಉಸಿರಾಡಿದ್ದಾರೆ.

ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶ್ರೀಗಳಿಗೆ ಹಳೇ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯರು ಶ್ರೀಮಠದಲ್ಲೇ ಬೀಡುಬಿಟ್ಟಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಪ್ರತಿಕ್ಷಣವೂ ನಿಗಾ ವಹಿಸುತ್ತಿದ್ದಾರೆ.

ಸಿದ್ದಗಂಗಾ ಮಠಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ. ಅಪಾರ ಪ್ರಮಾಣದಲ್ಲಿ ಭಕ್ತರು ಕೂಡ ಬಂದು ಶ್ರೀಗಳ ದರ್ಶನ ಪಡೆಯಲು ಕಾಯ್ತಿದ್ದಾರೆ. ಆದರೆ ಸೋಂಕು ತಗಲುವ ದೃಷ್ಟಿಯಿಂದ ಯಾರಿಗೂ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಈ ನಡುವೆ ಶ್ರೀಮಠಕ್ಕೆ ಬಿಗಿ ಭದ್ರತೆ ಕೂಡ ಕಲ್ಪಿಸಲಾಗಿದೆ.

ಹೆಲಿಪ್ಯಾಡ್ ನಿರ್ಮಾಣ: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಸ್ವಾಮೀಜಿ ದರ್ಶನ ಪಡೆಯಲೂ ನೂರಾರು ಗಣ್ಯರು ಮಠಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಝಡ್ ಪ್ಲಸ್ ಸೆಕ್ಯೂರಿಟಿ ಇರುವಂತಹ ಗಣ್ಯರು ಏಕಕಾಲದಲ್ಲಿ ಮಠಕ್ಕೆ ಆಗಮಿಸಿದ್ರೆ ಯಾವುದೇ ರೀತಿ ತೊಂದರೆಯಾಗದ್ದಂತೆ ಮುಂಜಾಗ್ರತಾ ಕ್ರಮವಾಗಿ ತುಮಕೂರು ನಗರದ ಅದರಲ್ಲೂ ಸಿದ್ದಗಂಗಾ ಮಠಕ್ಕೆ ಸಮೀಪವಾಗುವ ಐದು ಸ್ಥಳಗಳಲ್ಲಿ 14 ಹೆಲಿಪ್ಯಾಡ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ತುಮಕೂರು ನಗರದ ವಿವಿ ಕ್ಯಾಂಪಸ್ ನಲ್ಲಿ 4, ಎಂ.ಜಿ ಸ್ಟೇಡಿಯಂ ನಲ್ಲಿ 1, ಎಸ್‍ಐಟಿ ಕಾಲೇಜಿನಲ್ಲಿ 2, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 7 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *