Districts
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಡಕು – ನಿರಾಣಿ, ಕಾಶಪ್ಪನವರ್ ಮಧ್ಯೆ ಬಿಗ್ ಫೈಟ್

– ವಿಧಾನಸೌಧಕ್ಕೆ ಮುತ್ತಿಗೆ ಬದಲಿಗೆ 21ಕ್ಕೆ ಸಮಾವೇಶ
ತುಮಕೂರು: 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದಿಂದ ಹೋರಾಟ ತೀವ್ರಗೊಂಡಿದೆ. ಸ್ಪಂದಿಸದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವಿಚಾರವಾಗಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ವಾಕ್ಸಮರವೇ ನಡೆದಿದೆ.
ಸಭೆಯಲ್ಲಿ ಸಚಿವರಾದ ನಿರಾಣಿ, ಸಿಸಿ ಪಾಟೀಲ್ ಸೇರಿ ಹಲವು ಮುಖಂಡರು ವಿಧಾನಸೌಧ ಮುತ್ತಿಗೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಧ್ಯೆ ಮಾತಿನ ಚಕಮಕಿಯೇ ನಡೆದಿದೆ. ಸಭೆಯಿಂದ ವಿಜಯಾನಂದ ಕಾಶಪ್ಪನವರ್ ಹೊರ ಬರಲು ಮುಂದಾಗಿದ್ದಾರೆ. ಕೂಡಲೇ ಸಭೆಯಲ್ಲಿದ್ದ ಮುಖಂಡರು ಕಾಶಪ್ಪನವರ್ ಮನವೊಲಿಸಿ ಮತ್ತೆ ಸಭೆ ಒಳಗೆ ಕರೆದುಕೊಂಡು ಹೋದ್ರು.
ಸಭೆಯಲ್ಲಿ ನಿರಾಣಿ ಕೈ ಮೇಲುಗೈ..!
ಒಂದೂವರೆ ಗಂಟೆಗಳ ಕಾಲ ನಡೆದ ಪಂಚಮಸಾಲಿ ಸಭೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಮೇಲುಗೈ ಸಾಧಿಸಿದ್ದಾರೆ. ಸಚಿವ ನಿರಾಣಿ ಮನವೊಲಿಕೆ ಬಳಿಕ ವಿಧಾನಸೌಧ ಮುತ್ತಿಗೆ ಕೈಬಿಟ್ಟು, ಇದೇ 21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧಾರಕ್ಕೆ ಬಂದಿದ್ದಾರೆ. ಸಮಾವೇಶದಲ್ಲಿ 10 ಲಕ್ಷ ಪಂಚಮಸಾಲಿಗಳು ಸೇರಲಿದ್ದು, ಸಮಾವೇಶದ ಪೂರ್ವದಲ್ಲೇ ಮೀಸಲಾತಿ ಘೋಷಣೆ ಮಾಡಬೇಕು ಅಂತ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಕೊಟ್ಟ ಮಾತು ತಪ್ಪಿದ್ದಾರೆ. ಮೀಸಲಾತಿ ನೀಡದಿದ್ದರೆ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಅಂತ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ರು.
ಇನ್ನೂ ತುಮಕೂರಿನಲ್ಲಿ ನಡೆದ ಸಭೆಯಿಂದಾಗಿ ಪಂಚಮಸಾಲಿ ಹೋರಾಟದ ಉಗ್ರ ಸ್ವರೂಪಕ್ಕೆ ಬ್ರೇಕ್ ಬಿದ್ದಿದೆ. ಬೆಂಗಳೂರು ತಲುಪುವಷ್ಟರಲ್ಲಿ ಅಧಿಸೂಚನೆ ಹೊರಡಿಸದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಿದ್ದರು. ಆದರೆ ಅಧಿಸೂಚನೆ ಪತ್ರ ಕೈಯಲ್ಲಿ ಹಿಡಿದೇ ಊರಿಗೆ ವಾಪಸ್ಸಾಗ್ತಿನಿ ಅಂದಿದ್ದ ಜಯಮೃತ್ಯುಂಜಯ ಸ್ವಾಮೀಜಿಗೆ ಹಿನ್ನಡೆಯಾಗಿದೆ. ಸಚಿವ ಮುರುಗೇಶ್ ನಿರಾಣಿ ಮುನ್ನಡೆ ಹೋರಾಟದ ತೀವ್ರತೆ ಕಡಿಮೆಗೊಳಿಸಿದೆ. ಆ ಮೂಲಕ ಸಿಎಂ ಯಡಿಯೂರಪ್ಪಗೆ ಆಗುವ ಮುಜುಗರವನ್ನ ನಿರಾಣಿ ತಪ್ಪಿಸಿದ್ದಾರೆ.
ಮೀಸಲಾತಿ ವಿಚಾರವಾಗಿ ತಮ್ಮದೇ ರಾಜ್ಯ ಸರ್ಕಾರದ ಸಚಿವರ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಗರಂ ಆಗಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಅರ್ಹತೆ ಇದ್ದವರು ಮೀಸಲಾತಿ ಕೇಳಬೇಕು. ಅರ್ಹತೆ ಇಲ್ಲದವರು ಮೀಸಲಾತಿ ಕೇಳುವುದು ರಾಜಕೀಯ ನಾಟಕ ಅಂತ ಮುರುಗೇಶ್ ನಿರಾಣಿ, ಈಶ್ವರಪ್ಪ ಸೇರಿ ಹಲವು ನಾಯಕರ ಮೇಲೆ ಪರೋಕ್ಷವಾಗಿ ಸಿಟ್ಟು ಹೊರಹಾಕಿದ್ದಾರೆ. ಒಟ್ಟಿನಲ್ಲಿ ಪಂಚಮಸಾಲಿ ಹೋರಾಟ ಸರ್ಕಾರಕ್ಕೆ ತಲೆಬಿಸಿಯಾಗಿದೆ. ಸರ್ಕಾರಕ್ಕೆ ಡೆಡ್ಲೈನ್ ನೀಡಿರುವ ಪಂಚಮಸಾಲಿ ಮುಖಂಡರು, ಸ್ವಾಮೀಜಿಗಳು ಸಮಾವೇಶ ನಡೆಸಿ ಬಲ ಪ್ರದರ್ಶಿಸಲು ಮುಂದಾಗಿದ್ದಾರೆ.
