Connect with us

Districts

ಸಂಬಳ ಆಗಿಲ್ಲವೆಂದು ಕಂಡವರ ಹೊಟ್ಟೆಗೆ ಕನ್ನ- ಫಲಾನುಭವಿಗಳ ಬಳಿ ಅಧಿಕಾರಿಗಳು ಕೀಳ್ತಾರೆ ಹಣ

Published

on

ತುಮಕೂರು: ಕೊರೊನಾ ಅದೆಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಆದರೆ ಕೆಲ ಅಧಿಕಾರಿಗಳು ಮಾತ್ರ ಕೊರೊನಾವನ್ನೇ ಅಸ್ತ್ರ ಮಾಡಿಕೊಂಡು ದುಡ್ಡು ಮಾಡ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸ್ಯಾಲರಿ ಆಗಿಲ್ಲ ಅಂತ ಫಲಾನುಭವಿಗಳ ಬಳಿ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ.

ಹೌದು. ಕೊರಟಗೆರೆ ತಾಲೂಕಿನ ಶಿವಪುರದ ನಿವಾಸಿ ರಮೇಶ್, ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ. ಮಂಜೂರಾತಿಗೆ ಅರ್ಜಿ ಹಾಕಿದ್ದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರ್ಜಿ ಪುರಸ್ಕೃತಗೊಂಡಿತ್ತು. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅಂತಾರಲ್ಲ ಅದೇ ರೀತಿ ಚೆಕ್ ಪಾಸ್ ಆಗಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಿಬ್ಬಂದಿ 10 ಸಾವಿರ ರೂ ಲಂಚ ಕೇಳಿದ್ದಾರೆ. ಕೇಸ್ ವರ್ಕರ್‍ಗಳಾದ ವೆಂಕಟೇಶ್ ಹಾಗೂ ಸೋಮಶೇಖರ್ ಅಧಿಕಾರಿಗಳ ಹೆಸರು ಹೇಳಿ ಡೀಲ್ ಕುದುರಿಸಿದ್ದಾರೆ.

ಫಲಾನುಭವಿ: ದುಡ್ಡು ಏನೋ ಕೊಡೋಣ ಕನ್ಫರ್ಮ್ ಆಗಿ ಕೆಲಸ ಆಗುತ್ತೆ ಅಲ್ವಾ..?
ಸಿಬ್ಬಂದಿ ವೆಂಕಟೇಶ್: ಆಗತ್ತೆ ಪಕ್ಕಾ ಆಗತ್ತೆ.. ಶೇ.100 ಇವತ್ತು ಆದರೆ ನಾಳೆ ಸಾಹೇಬ್ರ ಸಹಿ ಹಾಕಿಸಿ ಒಂದೆರಡು ದಿನದಲ್ಲಿ ಆಗತ್ತೆ. ಮ್ಯಾನೇಜರ್ ಅಕೌಂಟಿಂದ. ಫಲಾನುಭವಿ ಅಕೌಂಟಿಗೆ ಟ್ರಾನ್ಸಪರ್ ಆಗುತ್ತೆ. ಇವರು ಕನ್ಫರ್ಮ್ ಆಗಿ ನಾಳೆ ಸಹಿ ಹಾಕಿದರೆ ಸೋಮವಾರ ಅಷ್ಟೊತ್ತಿಗೆ ಇವರಿಗೆ ದುಡ್ಡು ಬರತ್ತೆ.
ಫಲಾನುಭವಿ: ಎಷ್ಟು ಕೊಡಬೇಕು..?
ಸಿಬ್ಬಂದಿ ವೆಂಕಟೇಶ್: ಅದೆಷ್ಟು ಮಾತಾಡಿದಾರೊ ಗೊತ್ತಿಲ್ಲ. ಆಗಲೇ ಫಿಕ್ಸ್ ಮಾಡಿದ್ದಾರೆ.

ಫಲಾನುಭವಿ: ನಾವೆನೋ ಬೇರೆ ಕೆಲಸಕ್ಕೆ ಬಂದಿದ್ವಿ. ಈ ಯಪ್ಪಾ ಅರ್ಜೆಂಟ್ ಮಾಡ್ದ. ಬೆಳಗ್ಗೆ ಕೊಟ್ಟು ಕಳಿಸ್ತಿನಿ. ನೀವು ಆದರೆ ನೋಡಿ ಒಂದ್ ಎರಡು ಸಾವಿರ ಉಳಿಸಿ.
ಸಿಬ್ಬಂದಿ ಸೋಮಶೇಖರ: ಅಣ್ಣಾ ದೇವರಾಣೆ. ನಮಗೂ ಕೊರೋನಾದಿಂದ 3-4 ತಿಂಗಳಿಂದ ಸ್ಯಾಲರಿ ಆಗಿಲ್ಲ. ಇನ್ನೇನ್ ಅಂದರೆ ಅದರಲ್ಲಿ ನನ್ನದೇನು ಪಾತ್ರ ಇಲ್ಲ.
ಹೀಗೆ ಸಂಬಳ ಆಗಿಲ್ಲ ಅಂತ ಹಣ ವಸೂಲಿ ಕೆಲಸಕ್ಕೆ ಇಳಿದಿದ್ದಾರೆ. ಇದೆಷ್ಟು ಸರಿ ಅಂತ ಫಲನಾಭವಿ ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗಕ್ಕಾಗಿ ಸುಮಾರು 53 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಕೂಡ ತಲಾ 10 ಸಾವಿರ ಫಿಕ್ಸ್ ಮಾಡಿದ್ದೀವಿ ಎಂದು ಲಂಚಬಾಕ ನೌಕರರು ಆಫ್ ದಿ ರೆಕಾರ್ಡ್‍ನಲ್ಲಿ ಹೇಳುತ್ತಾರೆ. ಲಾಕ್‍ಡೌನ್‍ನಿಂದಾಗಿ ಜನರಿಗೆ ಕೆಲಸ ಇಲ್ಲದೇ ಕೈಯಲ್ಲಿ ಕಾಸಿಲ್ಲ. ಈ ನಡುವೆ ಸರ್ಕಾರಿ ನೌಕರರು ಕೊರೊನಾ ನೆಪ ಹೇಳಿ ಬಡ ಜನರ ರಕ್ತ ಹೀರುತ್ತಿರುವುದು ನಿಜಕ್ಕೂ ನಾಚಿಕೆಯ ಸಂಗತಿ.