Crime
ಪ್ರಿಯಕರ ಮಾತಿನಿಂದ ಮನನೊಂದು ವಿಷ ಸೇವಿಸಿದ್ದ ಪ್ರಿಯತಮೆ ಸಾವು

ತುಮಕೂರು: ಪ್ರಿಯಕರನ ಮಾತಿನಿಂದ ನೊಂದು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಿಯತಮೆ ಇದೀಗ ಮೃತಪಟ್ಟಿದ್ದಾಳೆ. ಈ ಘಟನೆ ತುಮಕೂರು ನಗರದ ಕ್ಯಾತಸಂದ್ರದ ಗಿರಿನಗರದಲ್ಲಿ ನಡೆದಿದೆ.
ಮೃತಳನ್ನು ಫರ್ಹಾನ(19) ಎಂದು ಗುರುತಿಸಲಾಗಿದೆ. ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಹಾನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಫೆಬ್ರವರಿ 5 ರಿಂದ ಫರ್ಹಾನ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ನಿನ್ನೆಯಷ್ಟೇ ಕುಟುಂಬಸ್ಥರು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಇದೀಗ ಫರ್ಹಾನ ಪೋಷಕರು ಪ್ರಿಯಕರನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಫರ್ಹಾನ, ನೈಮನ್ ಎಂಬ ಯುವಕನನ್ನ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳು. ನೈಮನ್ ಆಗಾಗ ನಿನ್ನ ನಡೆತೆ ಸರಿ ಇಲ್ಲ ಎಂದು ಹಲ್ಲೆ ನಡೆಸುತ್ತಿದ್ದ. ಅಂತೆಯೇ ಫೆ. 5ರಂದು ಫರ್ಹಾನಳಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಆದರೆ ಮತ್ತೆ ಹಿಂದಿರುಗಿ ಬಂದಿದ್ದ ಫರ್ಹಾನಳ ಬಾಯಲ್ಲಿ ನೊರೆ ಕಂಡು ಗಾಬರಿಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ ಫರ್ಹಾನ ಸಾವನ್ನಪ್ಪಿದ್ದು, ನೈಮನ್ ವಿಷ ಅಹಾರ ತಿನ್ನಿಸಿ ಕೊಲೆ ಯತ್ನ ನಡೆಸಿದ್ದಾನೆ ಎಂದು ಆಕೆಯ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ಕ್ಯಾತಸಂದ್ರ ಪೊಲೀಸರು ನೈಮನ್ ನನ್ನು ವಶಕ್ಕೆ ಪಡೆದಿದ್ದಾರೆ.
