Connect with us

Corona

ಗಬ್ಬು ನಾರುತ್ತಿದೆ ಕೊಠಡಿಗಳು, ಮೂಲಸೌಕರ್ಯವೇ ಇಲ್ಲ- ಅವ್ಯವಸ್ಥೆಗಳ ಆಗರವಾದ ಕ್ವಾರಂಟೈನ್ ಕೇಂದ್ರ

Published

on

ತುಮಕೂರು: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ಪರಿಣಾಮ ಸೋಂಕಿತರ ಹಾಗೂ ಶಂಕಿತರ ಸಂಖ್ಯೆ ಕೂಡ ಜಾಸ್ತಿಯಾಗ್ತಾ ಇದೆ. ಆದರೆ ಸೋಂಕಿತರನ್ನ, ಕ್ವಾರಂಟೈನ್‍ನಲ್ಲಿ ಇದ್ದವರನ್ನ ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ. ಈ ಮೂಲಕ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿವೆ. ಗುಬ್ಬಿ ಪಟ್ಟಣದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‍ನಲ್ಲಿನ ಕ್ವಾರಂಟೈನ್ ಕೇಂದ್ರ ನಿಜಕ್ಕೂ ನರಕ ಸದೃಶ್ಯವಾಗಿದೆ.

ಮಹಾಮಾರಿ ಕೊರೊನಾ ಕಂಟ್ರೋಲ್ ಮಾಡುವಲ್ಲಿ ಸರ್ಕಾರ ಪದೇ ಪದೇ ಎಡವುತ್ತಿದೆ. ಸೋಂಕಿತರಿಗೆ, ಶಂಕಿತರಿಗೆ ಮೂಲ ಸೌಕರ್ಯ ಕೊಡುವಲ್ಲಿ ವಿಫಲವಾಗಿದೆ. ಅದರಲ್ಲೂ ಕ್ವಾರಂಟೈನ್ ಕೇಂದ್ರಗಳ ಕರ್ಮಕಾಂಡವಂತೂ ಇನ್ನೂ ಮುಂದುವರಿದಿದೆ. ಗುಬ್ವಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‍ನ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಗಳ ಆಗರವಾಗಿದೆ. ಸುಮಾರು 53 ಜನ ಹಾಸ್ಟೆಲ್‍ನಲ್ಲಿ ಇದ್ದಾರೆ. ಇಲ್ಲಿ ಇರೋರು ಯಾವುದೇ ಮೂಲ ಸೌಕರ್ಯ ಇಲ್ಲದೇ ಪರದಾಡ್ತಿದ್ದಾರೆ. ಅದರಲ್ಲೂ ಶೌಚಾಲಯವಂತೂ ಗಬ್ಬೆದ್ದು ನಾರುತ್ತಿದೆ. ಕ್ಲೀನ್ ಮಾಡೋರೆ ಇಲ್ಲ. ಇದರಿಂದ ಕ್ವಾರಂಟೈನ್‍ನಲ್ಲಿದ್ದವರೂ ಇನ್ಯಾವುದೋ ಬೇರೆ ರೋಗಕ್ಕೆ ತುತ್ತಾಗುವ ಭಯದಲ್ಲಿ ಕಾಲ ಕಳೆಯುತಿದ್ದಾರೆ.

ಕಿಟ್ಟದಕುಪ್ಪೆ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 53 ಜನರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೇವಲ ಶುಚಿತ್ವ ಮಾತ್ರ ಅಲ್ಲ ಊಟ ಮತ್ತು ನೀರನ್ನು ಗ್ರಾಮ ಪಂಚಾಯ್ತಿಯಿಂದ ನೀಡಲಾಗುತ್ತಿದೆ. ಅದನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಕಟ್ಟಿ ಪ್ರಾಣಿಗಳಿಗೆ ನೀಡುವಂತೆ ಎಸೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗುಣಮಟ್ಟದ ಆಹಾರ ಒದಗಿಸಲು ಆರೋಗ್ಯ ಇಲಾಖೆ ವಿಫಲವಾಗಿದೆ. ಪ್ರತಿ ಕೊಠಡಿ ಸೊಳ್ಳೆಗಳ ಉಗ್ರಾಣವಾಗಿದ್ದು, ಕ್ವಾರಂಟೈನ್‍ನಲ್ಲಿದ್ದವರಿಗೆ ನಿದ್ದೆಬಾರದಂತಾಗಿದೆ. ಇದನ್ನೂ ಓದಿ: ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳೇ ಕಸ ಗುಡಿಸಬೇಕು, ನೆಲ ಒರೆಸಬೇಕು!

ಇದು ಕೇವಲ ಗುಬ್ಬಿಯ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದ ದುಃಸ್ಥಿತಿ ಅಲ್ಲ. ಜಿಲ್ಲೆಯ ಬಹುತೇಕ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದ್ದು ಕ್ವಾರಂಟೈನ್‍ನಲ್ಲಿದ್ದವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.