Districts
ಭ್ರಷ್ಟಾಚಾರ ವಿಧಾನಸೌಧದಲ್ಲಿ ಡ್ಯಾನ್ಸ್, ಭರತನಾಟ್ಯ ಮಾಡ್ತಿದೆ: ಪರಮೇಶ್ವರ್

ತುಮಕೂರು: ಭ್ರಷ್ಟಚಾರ ವಿಧಾನಸೌಧದಲ್ಲಿ ಡ್ಯಾನ್ಸ್ ಮಾಡುತ್ತಿದೆ. ಭರತನಾಟ್ಯ ಮಾಡುತ್ತಿದೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನ ಶಿರಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮವರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದೀರಾ? ಏನು ಕೆಲಸ ಮಾಡಿದ್ದೀರಾ?. ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳಾದ್ರೂ ವಯಸ್ಸಾದವರಿಗೆ ಪೆನ್ಷನ್ ಕೊಡ್ತಿಲ್ಲ ಎಂದು ಕಿಡಿಕಾರಿದರು.
ಭ್ರಷ್ಟಾಚಾರ ವಿಧಾನಸೌಧದಲ್ಲಿ ಡ್ಯಾನ್ಸ್ ಮಾಡುತ್ತಿದೆ, ಭರತನಾಟ್ಯ ಮಾಡುತ್ತಿದೆ. ಕಾಮತ್ ಹೋಟೆಲ್ನಲ್ಲಿ ರೇಟ್ ಫಿಕ್ಸ್ ಮಾಡಿದಂತೆ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಪ್ರಧಾನಿ ಇದು 10 ಪರ್ಸೆಂಟ್ ಸರ್ಕಾರ ಅಂತ ಹೇಳಿದ್ರು, ಈ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಅಂತ ಹೇಳಬೇಕು ಎಂದು ಪ್ರಶ್ನಿಸಿದರು. ಇದೇ ವೇಳೆ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿ.ಬಿ.ಐ ವಿಚಾರಣೆಯ ಕುರಿತು ಪ್ರತಿಕ್ರಿಯಿಸಿದ ಪರಂ, ಇಲಾಖೆಯವರು ಅವರ ಕೆಲಸವನ್ನು ಅವರು ಮಾಡಿದ್ದಾರೆ. ವಿಚಾರಣೆ ಏನಿಲ್ಲ, ಅವರಿಗೆ ಸ್ಪಷ್ಟೀಕರಣ ಬೇಕಿತ್ತು. ಅದನ್ನು ಕೇಳಿದರು ಅಷ್ಟೇ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ, ಮಾಜಿ ಸಂಸದ ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್ ಹಾಗೂ ಶಪೀ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.
