Connect with us

Cinema

ಸುರೇಂದ್ರನನ್ನ ನಾನೇ ಕೊಂದಿದ್ದು – ಪೊಲೀಸರಿಗೆ ಆಡಿಯೋ ಕಳುಹಿಸಿದ ಆರೋಪಿ

Published

on

ಮಂಗಳೂರು: ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಆರೋಪಿ ಸತೀಶ್ ಕುಲಾಲ್ ಎಂಬಾತ ಪೊಲೀಸರಿಗೆ ಆಡಿಯೋ ಕಳುಹಿಸಿದ್ದಾನೆ. ಆಡಿಯೋದಲ್ಲಿ ಸುರೇಂದ್ರನನ್ನ ಕೊಲೆ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ

ಆಡಿಯೋದಲ್ಲಿ ಏನಿದೆ?
ನಮಸ್ತೆ ನಾನು ಸತೀಶ್ ಮಾತನಾಡೋದು. ನಿನ್ನೆ ರಾತ್ರಿ ವಸ್ತಿ ಅಪಾರ್ಟ್ ಮೆಂಟ್ ನಲ್ಲಿ ಸುರೇಂದ್ರನ ಹತ್ಯೆಯಾಗಿದೆ. ಇದನ್ನು ನಾನೇ ಮಾಡಿದ್ದು. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಇಂತಹ ಪಾಪದ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಒಟ್ಟಿಗೆ ಇದ್ದವನು. ಅವನ ಎಲ್ಲ ಅವ್ಯವಹಾರಗಳು ಗೊತ್ತಿತ್ತು. ಮೊನ್ನೆ ನಡೆದ ಕಿಶನ್ ಹೆಗ್ಡೆ ಕೊಲೆಯಲ್ಲಿ ಇವನು ಹಣದ ಸಹಾಯ ಮಾಡಿದ್ದ ವಿಷಯ ನನಗೆ ತಿಳಿದಿತ್ತು.

ನಾನು ಅವನ ಹತ್ತಿರ ಹೇಳಿದ್ದೆ. ನೀನು ತಪ್ಪು ಮಾಡ್ತಾ ಇದ್ದೀಯ ಸುರೇಂದ್ರ. ನಿನಗೆ ಬೇಡದ ವಿಷಯ. ಆಗ ಈ ವಿಷಯ ಹೊರಗಡೆ ಹೇಳಿದ್ರೆ ನಿನ್ನನ್ನು ಸಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದ. ಮೊನ್ನೆ ಅನಾಮಿಕನಿಗೆ ಕರೆ ಮಾಡಿ ಜೈಲಿನಲ್ಲಿರೋ ಮನೋಜನಿಗೆ ಹಣ, ಬಟ್ಟೆ ಕೊಡಲಿಕ್ಕಿದೆ. ಇದಕ್ಕೆ ನಿಮ್ಮ ಸಹಾಯ ಬೇಕು ಅಂತಾ ಹೇಳುತ್ತಿದ್ದ. ಮತ್ತೊಂದು ದಿನ ಅವರಿಗೆ ಕರೆ ಮಾಡಿ ಬಟ್ಟೆ, ಹಣ ತಲುಪಿಸಿದ್ದೇನೆ. ಸಹಾಯ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಅಂತಾ ಹೇಳಿದ್ದನ್ನು ನಾನು ಕೇಳಿದ್ದೇನೆ. ಇದನ್ನೂ ಓದಿ: ಹಾಡಹಗಲೇ ಕಿಶನ್ ಹೆಗ್ಡೆ ಕತ್ತು ಕತ್ತರಿಸಿ ಬರ್ಬರ ಕೊಲೆ

ಈ ವಿಚಾರದಲ್ಲಿ ನಾನು ಕಿಶನ್ ಜೊತೆ ಇದ್ದ ನನ್ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದೆ. ಅವನಿಗೆ ಈ ವಿಚಾರದಲ್ಲಿ ಕೋಪ ಮತ್ತು ಬೇಸರ ಕೂಡ ಇತ್ತು. ಇವನು ಇದೇ ರೀತಿ ಇದ್ದರೆ ಸುರೇಂದ್ರ ಮತ್ತು ಕೋಡಿಕೆರೆ ಮನೋಜನಿಂದ ಹಲವು ಯುವಕರ ಕೊಲೆಯಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಾವು ಈ ಕೊಲೆ ಮಾಡಿದ್ದೇವೆ. ನಾವೀಗ ಕಾರವಾರದಲ್ಲಿದ್ದೇವೆ. ನಮಗೆ ಏನು ಮಾಡಬೇಕೆಂದು ತೋಚದೆ ಇಲ್ಲಿಗೆ ಬಂದಿದ್ದೇವೆ. ಇನ್ನೊಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗತ್ತೇವೆ ಎಂದು ಸತೀಶ್ ಹೇಳಿದ್ದಾನೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಸುರೇಂದ್ರ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕನ್ನಡ ಚಿತ್ರ ಸವರ್ಣದೀರ್ಘ ಸಂಧಿ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ನಟಿಸಿದ್ದ ಸುರೇಂದ್ರ ಬಂಟ್ವಾಳ್ ಕಳೆದ 2018ರ ಜೂನ್‍ನಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬಂಟ್ವಾಳ್ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಸುರೇಂದ್ರ ಹೊರಬಂದಿದ್ದರು.

Click to comment

Leave a Reply

Your email address will not be published. Required fields are marked *