Chikkamagaluru
ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

ಚಿಕ್ಕಮಗಳೂರು: ಪಾದಯಾತ್ರೆ ಹೊರಟಿದ್ದ ಭಕ್ತರಿಗೆ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಶಿವರಾತ್ರಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೆ ಭಕ್ತರು ಹೊರಟಿದ್ದರು.
ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 12 ಪಾದಯಾತ್ರಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವ ಭಕ್ತರಿಗೂ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ಭಕ್ತರಿಗೆ ಡಿಕ್ಕಿಯಾಗಿ ರಸ್ತೆ ಎರಡೂ ಬದಿಯ ಪ್ರಪಾತಕ್ಕೆ ನಿರ್ಮಿಸಿರುವ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಪಾದಯಾತ್ರೆ ಹೊರಟಿದ್ದ ಭಕ್ತರು ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಗ್ರಾಮದವರಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನ ಉಜಿರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
