Crime
ಮರಳು ತುಂಬಿದ್ದ ಲಾರಿ, ಕಾರಿನ ಮೇಲೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು

ಲಕ್ನೋ: ಮರಳು ತುಂಬಿದ ಲಾರಿ ಸ್ಕಾರ್ಪಿಯೋ ಕಾರೊಂದರ ಮೇಲೆ ಮಗುಚಿಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕೌಸಂಭಿ ಜಿಲ್ಲೆಯಲ್ಲಿ ನಡೆದಿದೆ.
10 ಜನರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರು. ಆಗ ರಸ್ತೆಯಲ್ಲಿ ಚಲಿಸುತ್ತಿದ್ದ ಮರಳು ತುಂಬಿದ ಟ್ರಕ್ ಇದ್ದಕ್ಕಿದ್ದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ.
ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ 10 ಜನರಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಅಪಘಾತ ನಡೆದ ಸ್ಥಳಕ್ಕೆ ಕೌಸಂಭಿ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ. ಟ್ರಕ್ ಟಯರ್ ಸ್ಪೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣಕ್ಕೆ ಸಿಗದೆ ಮಗುಚಿಬಿದ್ದಿದೆ. ಆಗ ಹತ್ತಿರದಲ್ಲೇ ಇದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಕೂಡಲೇ ಪರಿಹಾರ ಕೈಗೊಳ್ಳುವಂತೆ, ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
