Wednesday, 29th January 2020

Recent News

ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

ಹೈದರಾಬಾದ್: ಮಹಿಳಾ ಅರಣ್ಯಾಧಿಕಾರಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರೆಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಸಸಿ ನೆಡುವ ಮೂಲಕ ಅರಣ್ಯಾಧಿಕಾರಿಗಳು ತಕ್ಕ ಉತ್ತರ ನೀಡಿದ್ದಾರೆ.

ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಮಹಿಳಾ ಅಧಿಕಾರಿಗೆ ಬೆಂಬಲ ಸೂಚಿಸಿ, ಟಿಆರ್‍ಎಸ್ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಜೂನ್ 30 ರಂದು ಮಹಿಳಾ ಅರಣ್ಯಾಧಿಕಾರಿ ಚೋಲೆ ಅನಿತಾ ಅವರನ್ನು ಟಿಆರ್‍ಎಸ್ ಕಾರ್ಯಕರ್ತರು ಕೋಲುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಜು.1ರಂದು ಸುಮಾರು 400ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಾಲು ಸಾಲು ಸಸಿ ನೆಡುವ ಮೂಲಕ ಅನಿತಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 400ಕ್ಕೂ ಹೆಚ್ಚು ಅಧಿಕಾರಿಗಳು ಸಸಿ ನೆಡುವ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಅಭಿಯಾನವನ್ನೇ ಪ್ರಾರಂಭಿಸಲಾಗಿದೆ.

ವಿಡಿಯೋ ಹಾಕುವಾಗ ಕೆಲವು ಸಾಲುಗಳನ್ನು ಬರೆದಿರುವ ಪರ್ವೀಣ್ ಕಸ್ವಾನ್, ‘ಮಹಿಳಾ ರೇಂಜ್ ಆಫೀಸರ್ ಮೇಲೆ ಹಲ್ಲೆ ಮಾಡಿದ ಸ್ಥಳದಲ್ಲೇ ಸುಮಾರು 400ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಇತರರಿಂದ ಸಸಿ ನೆಡಲಾಗಿದೆ. ಈ ವೇಳೆ ಎಲ್ಲ ಹಿರಿಯ ಅಧಿಕಾರಿಗಳೂ ಸಹ ಉಪಸ್ಥಿತರಿದ್ದರು. ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆಯಲು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಹಲ್ಲೆ ಖಂಡಿಸಿ ಪ್ರತಿಕ್ರಿಯಿಸಲು ಇದೊಂದು ಉತ್ತಮ ಹೆಜ್ಜೆಯಾಗಿದೆ’ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್‍ನಲ್ಲಿ ಸಾಲಾಗಿ ನಿಂತಿರುವ ಅಧಿಕಾರಿಗಳ ಚಿತ್ರವನ್ನು ಹಾಕಿ ‘ಇದು ನಮ್ಮ ಪ್ರತಿಕ್ರಿಯೆ, ಚಿತ್ರವನ್ನು ಜೂಮ್ ಮಾಡಿ ನೋಡಿ, ಅದೇ ಜಾಗ. ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವುದು ಮಾತ್ರವಲ್ಲ, ಹಲ್ಲೆಗೆ ಪ್ರತಿಕ್ರಿಯೆ ನೀಡುವುದು ಆಗಿದೆ’ ಎಂದು ಬರೆದಿದ್ದು, ಇದೀಗ ಟ್ವಿಟ್ಟರ್‍ ನಲ್ಲಿ ಚಿತ್ರ ವೈರಲ್ ಆಗಿದೆ.

Leave a Reply

Your email address will not be published. Required fields are marked *