Monday, 19th August 2019

ತೆಲಂಗಾಣದಲ್ಲಿ ಕಾಂಗ್ರೆಸ್‍ಗೆ ಬಿಗ್ ಶಾಕ್ – ಟಿಆರ್‌ಎಸ್‌ ಸೇರಲಿದ್ದಾರೆ 12 ಜನ ‘ಕೈ’ ಶಾಸಕರು

ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್‍ನ 12 ಜನ ಶಾಸಕರು ಸಾಮೂಹಿಕವಾಗಿ ಟಿಆರ್‌ಎಸ್‌ ಸೇರಲು ಮುಂದಾಗಿದ್ದಾರೆ. ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಾಯಕರು ಶಾಕ್‍ಗೆ ಒಳಗಾಗಿದ್ದಾರೆ.

ಈ ಸಂಬಂಧ ಕಾಂಗ್ರೆಸ್‍ನ 12 ಶಾಸಕರು ವಿಧಾನಸಭಾ ಸ್ಪೀಕರ್ ಪೊಚರಾಮ್ ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ, ತಮ್ಮನ್ನು ಟಿಆರ್‌ಎಸ್‌ ಪಕ್ಷದಲ್ಲಿ ವಿಲೀನ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನಾಯ ಸೋಲು ಕಂಡಿದೆ. ಇದೇ ಕಾರಣಕ್ಕೆ ಶಾಸಕರು ಪಕ್ಷವನ್ನು ಬಿಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್‍ನ 12 ಶಾಸಕರು ಸಿಎಂ ಚಂದ್ರಶೇಖರ ರಾವ್ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದೇವೆ. ಈ ಸಂಬಂಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆ ನಡೆಸಿ ಟಿಆರ್‌ಎಸ್‌ ಸೇರುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಶಾಸಕ ಜಿ.ವೆಂಕಟರಮಣ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್‍ನ 11 ಜನ ಶಾಸಕರು ಟಿಆರ್‍ಎಸ್ ಪಕ್ಷವನ್ನು ಸೇರುವ ಕುರಿತು ಮಾರ್ಚ್ ನಲ್ಲಿ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಇಂದು ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ, ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರ ಕೆ.ಟಿ. ರಾಮರಾವ್ ಅವರನ್ನು ಭೇಟಿಮಾಡಿದ್ದರು. ಈ ವೇಳೆ ಪಕ್ಷಾಂತರವಾಗುವ ಕುರಿತು ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದೆ.

ತೆಲಂಗಾಣ ವಿಧಾನಸಭೆಯು ಒಟ್ಟು 119 ಸದಸ್ಯ ಬಲವನ್ನು ಹೊಂದಿದೆ. 91 ಸ್ಥಾನಗಳನ್ನು ಹೊಂದಿರುವ ಟಿಆರ್‌ಎಸ್‌ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ 19 ಶಾಸಕರನ್ನು ಹೊಂದಿದ್ದು, ಈ ಪೈಕಿ ಉತ್ತಮ್ ಕುಮಾರ್ ರೆಡ್ಡಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾಗಿದಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿದಿದೆ. ಈಗ 12 ಶಾಸಕರು ಕಾಂಗ್ರೆಸ್ ಬಿಡಲು ಮುಂದಾಗಿದ್ದಾರೆ. ಒಂದು ವೇಳೆ ಸ್ಪೀಕರ್ ಒಪ್ಪಿಗೆ ಸೂಚಿಸಿದರೆ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ.

ಒಟ್ಟು 2/3 ರಷ್ಟು ಶಾಸಕರು ಒಂದು ಪಕ್ಷವನ್ನು ತೊರೆದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ 12 ಮಂದಿ ಕೈ ಶಾಸಕರು ಕಾಂಗ್ರೆಸ್ ತೊರೆದರೂ ಅವರ ವಿರುದ್ಧ ಕ್ರಮ ಜರಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

Leave a Reply

Your email address will not be published. Required fields are marked *