ವಿಶ್ವಕಪ್‍ನಿಂದ ದಕ್ಷಿಣ ಆಫ್ರಿಕಾ ಔಟ್ – ಐಪಿಎಲ್‍ನತ್ತ ಬೊಟ್ಟು ಮಾಡಿದ ಡುಪ್ಲೆಸಿಸ್

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್‍ನಿಂದಲೇ ತಂಡ ವಿಶ್ವಕಪ್‍ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಟೀಂ ಮ್ಯಾನೇಜ್‍ಮೆಂಟ್ ತಂಡದ ಕೆಲ ಆಟಗಾರರಿಗೆ ಶ್ರೀಮಂತ ಲೀಗ್ ಆಡಲು ಅನುಮತಿ ನೀಡಬಾರದಿತ್ತು ಎಂದು ಫ್ಲಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಭಾನುವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 49 ರನ್ ಗಳ ಅಂತರದಿಂದ ಸೋಲುಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ಡುಪ್ಲೆಸಿಸ್, ತಂಡದ ಸೋಲಿನ ಬಗ್ಗೆ ಸರಿಯಾದ ಉತ್ತರ ನೀಡಲಾಗುತ್ತಿಲ್ಲ. ವಿಶ್ವಕಪ್ ದೃಷ್ಟಿಯಿಂದ ನಾವು ಐಪಿಎಲ್ ಆಡಬಾರದಿತ್ತು. ಕನಿಷ್ಠ ತಂಡದ ಪ್ರಮುಖ ವೇಗಿಯಾಗಿದ್ದ ರಬಾಡರನ್ನು ಐಪಿಎಲ್‍ನಿಂದ ದೂರ ಉಳಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

ಆಟಗಾರರು ವಿಶ್ರಾಂತಿ ಇಲ್ಲದೇ ನಿರಂತರವಾಗಿ ಟೂರ್ನಿಗಳಲ್ಲಿ ಆಡಿದರೆ ಇಂತಹ ಫಲಿತಾಂಶವೇ ಎದುರಾಗುತ್ತದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದು ಕೂಡ ಸೋಲಿಗೆ ಕಾರಣವಾಗಿದೆ. ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ನಮ್ಮ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದಿದ್ದಾರೆ.

ಇತ್ತ ರಬಾಡ 6 ಪಂದ್ಯಗಳಿಂದ 6 ವಿಕೆಟ್ ಗಳನ್ನು ಮಾತ್ರವೇ ಪಡೆದಿದ್ದರು. ಬಹುಮುಖ್ಯ ಟೂರ್ನಿಯಲ್ಲೇ ರಬಾಡ ಮಿಂಚಲು ವಿಫಲವಾಗಿದ್ದು ದಕ್ಷಿಣ ಅಫ್ರಿಕಾ ತಂಡದ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿತ್ತು. ಆದರೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಬಾಡ 12 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದರು. ಆದರೆ ಟೂರ್ನಿಯಲ್ಲಿ ಗಾಯಗೊಂಡಿದ್ದ ರಬಾಡ ಸರಿಯಾದ ವಿಶ್ರಾಂತಿ ಪಡೆಯದೆ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೇ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಕೂಡ ಐಪಿಎಲ್‍ನಲ್ಲೇ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.

ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೆ, ಇತ್ತ ಪಾಕ್ ಸೆಮಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಇದುವರೆಗೂ 6 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.

Leave a Reply

Your email address will not be published. Required fields are marked *