ನವದೆಹಲಿ : ಹೊಸ ಅಬಕಾರಿ ನೀತಿಯಲ್ಲಿ (Delhi Liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಸುಪ್ರೀಂಕೋರ್ಟ್ (Supreme Court) ಜಾಮೀನು ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಡಿ (ED) ಮತ್ತು ಸಿಬಿಐ ಪ್ರಕರಣದಲ್ಲಿ ಜಾಮೀನು (Bail) ಮಂಜೂರು ಮಾಡಿದೆ.
ವಿಚಾರಣೆಯ ದೀರ್ಘಕಾಲದ ವಿಳಂಬವು ಸಿಸೋಡಿಯಾ ಅವರ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದೆ. ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸ್ವಾತಂತ್ರ್ಯದ ಒಂದು ಮುಖವಾಗಿದೆ ಎಂದು ಅಭಿಪ್ರಾಯಪಟ್ಟು ನ್ಯಾಯಾಲಯವು ಸಿಸೋಡಿಯಾ ಮನವಿಯನ್ನು ಅಂಗೀಕರಿಸಿತು.
2 ಲಕ್ಷ ರೂ. ಮೌಲ್ಯದ ಬಾಂಡ್‌ಗಳನ್ನು ಒದಗಿಸಬೇಕು. ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು, ಪೊಲೀಸ್ ಠಾಣೆಗೆ ವರದಿ ಮಾಡಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು. ಇದನ್ನೂ ಓದಿ: Bangladesh Violence | 7,200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್
ಸಿಸೋಡಿಯಾ ಅವರು ತ್ವರಿತ ವಿಚಾರಣೆಯ ಹಕ್ಕಿನಿಂದ ವಂಚಿತರಾಗಿದ್ದಾರೆ. ತ್ವರಿತ ವಿಚಾರಣೆಯ ಹಕ್ಕು ಪವಿತ್ರ ಹಕ್ಕು. ವಿಚಾರಣೆಯ ವಿಳಂಬವು ಸಿಸೋಡಿಯಾ ಅವರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ. ಸಮಯಕ್ಕೆ ವಿಚಾರಣೆ ಪೂರ್ಣಗೊಳ್ಳುವ ಅವಕಾಶವಿಲ್ಲ, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ವಾಡಿಕೆಯಂತೆ ಜಾಮೀನು ನಿರಾಕರಿಸುವ ಮೂಲಕ ಸುರಕ್ಷಿತವಾಗಿ ಆಡುತ್ತಿವೆ. ಕೆಳಗಿರುವ ನ್ಯಾಯಾಲಯಗಳು ‘ಜಾಮೀನು ಅಲ್ಲ ಜೈಲು’ ನಿಯಮ ಎಂದು ತಿಳಿದುಕೊಳ್ಳುವ ಸಮಯ ಬಂದಿದೆ ಎಂದು ಸುಪ್ರೀಂಕೋರ್ಟ್ ಕೆಳ ಹಂತದ ನ್ಯಾಯಲಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಅಕ್ರಮ ಹಣ ಪ್ರಕರಣದ ಅಡಿಯಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ತ್ರಿವಳಿ ಪರೀಕ್ಷೆಯು ಪ್ರಸ್ತುತ ಜಾಮೀನು ಅರ್ಜಿಗೆ ಅನ್ವಯಿಸುವುದಿಲ್ಲ ಏಕೆಂದರೆ ಅರ್ಜಿಯು ವಿಚಾರಣೆಯ ವಿಳಂಬವನ್ನು ಆಧರಿಸಿದೆ ಎಂದು ಪೀಠ ಹೇಳಿದೆ. ದೀರ್ಘಕಾಲದ ಸೆರೆವಾಸದ ಅವಧಿಯಲ್ಲಿ ಜಾಮೀನು ನೀಡಬಹುದೆಂದು ಹೇಳುವ ತೀರ್ಪುಗಳನ್ನು ನಾವು ಗಮನಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ತ್ರಿವಳಿ ಪರೀಕ್ಷೆಯು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಗೋವಾದಲ್ಲಿ ಆಪ್ ಚುನಾವಣೆಗೆ ಹಣ ನೀಡಲು ಬಳಸಲಾದ ಲಂಚದ ಬದಲಾಗಿ ಕೆಲವು ಮದ್ಯ ಮಾರಾಟಗಾರರಿಗೆ ಲಾಭವಾಗುವಂತೆ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ತಿರುಚಿದ್ದಾರೆ. ಕೆಲವು ನಿಯಮ ಬದಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಫೆ 26, 2023 ರಂದು ಸಿಬಿಐ (CBI) ಬಂಧಿಸಿತ್ತು. ಎರಡು ವಾರದ ಬಳಿಕ ಜಾರಿ ನಿದೇಶನಾಲಯ (CBI) ಬಂಧನ ಮಾಡಿತ್ತು.